ಹಾಸನ : ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆವತಿಯಿಂದ ನ.23 ರಂದು ಬೆಳಗ್ಗೆ 9.30ಕ್ಕೆ ನಗರದ ಜಿಲ್ಲಾ ಸಿಂಥೆಟಿಕ್ ಕ್ರೀಡಾಂಗಣದಲ್ಲಿ ಬಾಲಕಿಯರಿಗಾಗಿ ಜಿಲ್ಲಾ ಮಟ್ಟದ ಅಸ್ಮಿತಾ ಅಥ್ಲೆಟಿಕ್ಸ್ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಸ್.ಎಲ್.ಪ್ರಸನ್ನ ಕುಮಾರ್ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೊಸ ಕ್ರೀಡಾ ಪ್ರತಿಭೆಗಳ ಅನ್ವೇಷಣೆ, ಗ್ರಾಮೀಣ ಹೆಣ್ಣು ಮಕ್ಕಳಿಗೆ ಉತ್ತೇಜನ, ಅವರ ಭಾಗಹಿಸುವಿಕೆ ಹೆಚ್ಚು ಮಾಡುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
12-14 ವರ್ಷ ಹಾಗೂ 14-16 ವರ್ಷದ ಹೆಣ್ಣು ಮಕ್ಕಳಿಗೆ ಸ್ಪರ್ಧೆ ನಡೆಯಲಿದೆ. ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಕಾರ್ಯಕ್ರಮದಡಿ, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಸಾಯಿ), ಯುವಜನ ಮತ್ತು ಕ್ರೀಡಾ ಸಚಿವಾಲಯ ಹಾಗೂ ಇಂಡಿಯನ್ ಅಥ್ಲೆಟಿಕ್ ಫೆಡರೇಶನ್ ಸಂಯುಕ್ತವಾಗಿ ದೇಶಾದ್ಯಂತ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದೆ ಎಂದರು.
14ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರಿಗಾಗಿ ಟ್ರಿಯಾಥ್ಲನ್, ಮೂರು ವಿಭಾಗಗಳಿದ್ದು, ಎ ವಿಭಾಗ: 60 ಮೀ. ಓಟ, ಲಾಂಗ್‌ಜಂಪ್, ಹೈಜಂಪ್, ಬಿ ವಿಭಾಗ: 60 ಮೀ. ಓಟ, ಲಾಂಗ್‌ಜಂಪ್, ಶಾಟ್‌ಪುಟ್, ಸಿ ವಿಭಾಗ: 60ಮೀ. ಓಟ,600 ಮೀ. ಓಟ, ಲಾಂಗ್‌ಜAಪ್, ಕಿಡ್ಸ್ ಜಾವೆಲಿನ್ 16 ವರ್ಷದೊಳಗಿನ ಬಾಲಕಿಯರಿಗಾಗಿ ವಿವಿಧ ಓಟ, ಜಂಪ್ ಹಾಗೂ ಡಿಸ್ಕಸ್ ಥ್ರೋ ಸ್ಪರ್ಧೆಗಳು ನಡೆಯಲಿವೆ ಎಂದು ವಿವರಿಸಿದರು.
14 ವರ್ಷದೊಳಗಿನ ಬಾಲಕಿಯರು:2011 ಡಿ.21ರಿಂದ2013 ಡಿ.20 ನಡುವೆ ಜನಿಸಿರಬೇಕು. 16 ವರ್ಷದೊಳಗಿನ ಬಾಲಕಿಯರು: 2009 ಡಿ.21 ರಿಂದ 2011 ಡಿ.20 ರ ನಡುವೆ ಜನಿಸಿರಬೇಕು. ವಿಜೇತರ ಆಯ್ಕೆ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳ ಸಮ್ಮುಖದಲ್ಲಿ ಸ್ಪರ್ಧೆಗಳ ಮೌಲ್ಯಮಾಪನಕ್ಕಾಗಿ ಅಂತಾರಾಷ್ಟ್ರೀಯ ಕ್ರೀಡಾಪಟು ಎಂ.ಕೆ. ಆಶಾ ಹಾಗೂ ಎಎಫ್‌ಐ ನೇಮಿಸಿರುವ ತರಬೇತಿದಾರರು ಹಾಜರಾಗಲಿದ್ದಾರೆ ಎಂದು ಹೇಳಿದರು. ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಶೇ.3 ರಷ್ಟು ಮೀಸಲು, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೂಡ ಕ್ರೀಡಾಪಟುಗಳಿಗೆ ವಿಶೇಷ ಅವಕಾಶ ಇದ್ದು, ಜಿಲ್ಲೆಯ ಬಾಲಕಿಯರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಮುಖಂಡ ಡಿ.ಸಿ. ಚಂದ್ರಶೇಖರ್ ಕ್ರೀಡಾಕೂಟ ಉದ್ಘಾಟಿಸಲಿದ್ದು, ಯುವ ಸಬಲೀಕರಣ ಕ್ರೀಡಾ ಇಲಾಖೆ ಅಧಿಕಾರಿ ಡಾ.ಆನಂದಮೂರ್ತಿ, ಅಂತಾರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಎಂ.ಕೆ. ಆಶಾ, ಟೈಮ್ಸ್ ಗ್ರೂಪ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಕೆ. ಗಂಗಾಧರ್, ಸರ್ಕಾರಿ ಕಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಟಿ.ಆರ್. ಮಹೇಂದ್ರ ಕುಮಾರ್ ಮೊದಲಾದವರು ಹಾಜರಿರುವರು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನವೀನ್ ಕುಮಾರ್, ಅಜಯ್ ಇದ್ದರು.










