ಅರಕಲಗೂಡು: ಪತಿ ಮತ್ತು ಅತ್ತೆಯ ಕಿರುಕುಳದಿಂದ ಮನನೊಂದ ಮಹಿಳೆಯೊಬ್ಬಳು ತನ್ನ ಮಗುವಿನೊಂದಿಗೆ ತಾಲೂಕಿನ ರಾಮನಾಥಪುರ ಬಳಿಯ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೂಲತಃ ಮೈಸೂರು ಜಿಲ್ಲೆ ಸಾಲಿಗ್ರಾಮ ಮೂಲದ ಮಹಾದೇವಿ(29) ಜೀವ ಕಳೆದುಕೊಂಡ ಮಹಿಳೆ. ಮನೆಯವರ ಕಿರುಕುಳದಿಂದ ಬೇಸತ್ತು ತಾಯಿ-ಮಗು ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಲೂಕಿನ ಬೆಟ್ಟಸೋಗೆ ಬಳಿ ಎರಡೂ ಮೃತದೇಹಗಳು ಪತ್ತೆಯಾಗಿವೆ. ಮಹಾದೇವಿ ಮೂರು ವರ್ಷದ ಹಿಂದೆ ಸೀಬಿಹಳ್ಳಿ ಗ್ರಾಮದ ಕುಮಾರ್ ಎಂಬುವನನ್ನ ಮದುವೆಯಾಗಿದ್ದಳು.
ಮೊದಲ ಮದುವೆಯಾಗಿ ವಿಚ್ಛೇದನ ಪಡೆದಿದ್ದ ಮಹಾದೇವಿ ನಂತರ ಕುಮಾರ್ ನೊಂದಿಗೆ ಎರಡನೇ ಮದುವೆ ಆಗಿದ್ದಳು. ಸಾಯುವ ಮುನ್ನ ವಿಡಿಯೋ ಮಾಡಿರುವ ತಾಯಿ, ಕಣ್ಣೀರು ಇಡುತ್ತಲೇ ತನಗೆ ಆಗುತ್ತಿರುವ ನೋವನ್ನು ಮಗುವನ್ನು ಕಂಕುಳನ್ನು ಎತ್ತಿಕೊಂಡೇ ಎಳೆ ಎಳೆಯಾಗಿ ವಿವರಿಸಿದ್ದಾಳೆ.

ನನ್ನ ಪತಿಯಿಂದ ನನಗೆ ತುಂಬಾ ಕಿರುಕುಳ ಆಗುತ್ತಿದೆ, ನನ್ನ ಶೀಲದ ಬಗ್ಗೆ ಪದೇ ಪದೆ ಅನುಮಾನ ಪಟ್ಟು ನನ್ನ ಮಗು ನನಗೆ ಹುಟ್ಟಿಲ್ಲ ಎಂದು ಹಿಂಸಿಸುತ್ತಾನೆ. ನನ್ನ ಗಂಡನ ತಾಯಿಯೂ ಕೂಡ ಹಿಂಸೆ ನೀಡುತ್ತಿದ್ದಾರೆ. ನನ್ನ ಗಂಡ ಶೀಲದ ಬಗ್ಗೆ ಬಾಯಿಗೆ ಬಂದಂತೆ ಮಾತ ನಾಡುತ್ತಾನೆ. ಈ ಸಂಬಂಧ ನಾನು ದೂರು ನೀಡಿದ ನಂತರ ಪೊಲೀಸರು ಕರೆದು ಎಷ್ಟೇ ಬುದ್ದಿ ಹೇಳಿದರೂ ನನ್ನ ಗಂಡ ಕೇಳುತ್ತಿಲ್ಲ ಎಂದು ಗಳಗಳನೆ ಅತ್ತಿದ್ದಾಳೆ.
ನನ್ನ ಸಾವಿನಿಂದ ಅವನಿಗೆ ನೆಮ್ಮದಿ ಸಿಗುವುದಾದರೆ ಸಿಗಲಿ ಎಂದು ವಿಡಿಯೋ ಮಾಡಿಟ್ಟು ನದಿಗೆ ಹಾರಿದ್ದಾಳೆ. ಇದಲ್ಲದೆ ಡೆತ್‌ನೋಟ್ ಸಹ ಬರೆದಿರುವ ಮಹಾದೇವಿ, ಮದುವೆ ಆದಾಗಿನಿಂದಲೂ ಕಿರುಕುಳ ಕೊಡುತ್ತಿದ್ದ ಗಂಡನ ನಡತೆಯಿಂದ ಬೇಸತ್ತು ಹೋಗಿದ್ದೇನೆ ಎಂದು ನಮೂದಿಸಿದ್ದಾಳೆ.
ಕಡೆಗೆ ಮಗು ಜೊತೆ ವಿಡಿಯೋ ಮಾಡಿ ನದಿಗೆ ಹಾರಿದ್ದು, ಒಂದೆಡೆ ಪತಿ ಹಾಗೂ ಆಕೆಯ ತಾಯಿಯ ಕಿರುಕುಳ ಮತ್ತೊಂದೆಡೆ ಪೊಲೀಸರ ನಿರ್ಲಕ್ಷ್ಯವೇ ಮಗಳ ಸಾವಿಗೆ ಕಾರಣವೆಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಈ ಸಂಬಂಧ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿ ಕುಮಾರ್ ನಿತ್ಯವೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದ.ಈ ಕಿರುಕುಳ ತಾಳಲಾರದೆ 15 ದಿನಗಳ ಹಿಂದೆ ಮಹಾದೇವಿ ತವರು ಮನೆ ಸೇರಿದ್ದಳು. ಆಗಲೂ ಅಶ್ಲೀಲ ಸಂದೇಶ ಕಳುಹಿಸಿ ಕುಮಾರ್ ಕಿರುಕುಳ ಮುಂದುವರಿಸಿದ್ದ ಎನ್ನಲಾಗಿದೆ.
ನ.14 ರಂದು ಪತಿ ವಿರುದ್ಧ ಪೊಲೀಸರಿಗೆ ದೂರು ನೀಡುವೆ ಎಂದು ಮನೆಯಿಂದ ಹೋದ ಮಹಾದೇವಿ, ಇದೀಗ ಮಗುವಿನೊಂದಿಗೆ ಜೀವವನ್ನೇ ಕಳೆದುಕೊಂಡಿರುವುದು ದುರಂತ.










