ಹಾಸನ: ಒನಕೆ ಓಬವ್ವ ಅವರ ಸಾಹಸಗಾಥೆ ಕೇಳಿದರೆ ನಡುಗುವ ರೋಮಾಂಚನ ಆಗಲಿದೆ. ಧೈರ್ಯ, ಶಕ್ತಿ, ದೇಶಭಕ್ತಿ, ಸಮಯಪ್ರಜ್ಞೆ ಮತ್ತು ಅಪ್ರತಿಮ ಸಾಹಸಗಳಿಂದ ಅವರು ಮಹಿಳಾ ಸಬಲೀಕರಣದ ಜೀವಂತ ಪ್ರತೀಕವಾಗಿ ಉಳಿದಿದ್ದಾರೆ. ಓಬವ್ವ ಎಂದರೇ ಸಾಹಸದ ಸಂಕೇತ. ಇಂದಿನ ಹೆಣ್ಣು ಮಕ್ಕಳಿಗೆ ಪ್ರೇರಣೆಯ ದೀಪ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ , ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಚಿತ್ತದ ನಿಗ್ರಹ, ಬುದ್ಧಿವಂತಿಕೆ ಹಾಗೂ ಅಚಲ ಮನೋ ಬಲದಿಂದ ಓಬವ್ವ ಒಬ್ಬರೇ ಶತ್ರುಸೇನೆಯ ವಿರುದ್ಧ ನಿಂತು ಹೋರಾಡಿದ ಸಾಹಸ ಇಂದಿಗೂ ಜನರ ಹೃದಯದಲ್ಲಿ ಕೆತ್ತನೆಯಾಗಿದೆ ಎಂದರು.
ಕಲ್ಲಿನಲ್ಲೇ ಕೆತ್ತಿದ ಶಿಲ್ಪಗಳಿಗಿಂತ ಜನಮನದಲ್ಲಿ ಉಳಿದ ಓಬವ್ವನ ಕಥೆ ಹೆಚ್ಚು ಅಮರವಾಗಿದೆ. ಪ್ರತಿಯೊಬ್ಬ ಹೆಣ್ಣುಮಕ್ಕಳಲ್ಲೂ ಓಬವ್ವನ ಆತ್ಮ ಸ್ಫೂರ್ತಿ ಜೀವಂತವಾಗಿದೆ. ಆದರೆ ಬದಲಾದ ಕಾಲಘಟ್ಟದಲ್ಲಿ ಒನಕೆ ಬದಲು ಪೆನ್ನು ಹಿಡಿಯುವ ಸಮಯ ಬಂದಿದೆ ಎಂದರು.
ಶಿಕ್ಷಣವೇ ಅವರ ಶಕ್ತಿ, ಜ್ಞಾನವೇ ಅವರ ಆಯುಧ. ನಿಜವಾದ ಶಕ್ತಿ ಎಂದರೆ ಕೇವಲ ಶತ್ರು ಹತ ಮಾಡುವುದಲ್ಲ. ಅದು ಅಜ್ಞಾನ, ಭಯ, ಅವಲಂಬನೆ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಸಾಮರ್ಥ್ಯ ಎಂದು ಕಿವಿಮಾತು ಹೇಳಿದರು.
ಹೆಣ್ಣುಮಕ್ಕಳು ಹೆದರದೆ ಮುಂದೆ ಬರಬೇಕು, ದುರ್ಬಲತೆ ಎಂಬ ಭಾವನೆ ನಿಲ್ಲಿಸಬೇಕು. ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ಶಿಕ್ಷಣವೇ ನಿಜವಾದ ಸಬಲೀಕರಣದ ದಾರಿ ಎಂದು ಸಲಹೆ ನೀಡಿದರು. ಓಬವ್ವ ಕೇವಲ ಇತಿಹಾಸದ ಪಾತ್ರವಲ್ಲ, ಅವಳು ಬದುಕಿನ ಪಾಠ. ಇಂದಿನ ಯುವತಿಯರು ಓನಕೆ ಬದಲಿಗೆ ಪೆನ್ನು ಹಿಡಿದು ಜ್ಞಾನೋದಯದ ಹಾದಿಯಲ್ಲಿ ನಡೆಯಬೇಕಾಗಿದೆ. ಅದೇ ಅವರ ನಿಜವಾದ ಶಕ್ತಿ ಎಂದರು.
ಕಾರ್ಯಕ್ರಮಕ್ಕೆ ಮೊದಲು ಒನಕೆ ಓಬವವ್ವರ ಭಾವಚಿತ್ರದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೆರವಣಿಗೆಗೆ ಚಾಲನೆ ಕೊಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ನಂತರ ಅಂಬೇಡ್ಕರ್ ಭವನದ ಆವರಣದಲ್ಲಿ ಕೊನೆಗೊಳಿಸಿದರು. ಅಪರ ಜಿಲ್ಲಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಗೀತಾ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಕಲಬುರಗಿಯ ವಿಠಲ್ ವರ್ಗನ್,
ಆರ್.ಪಿ.ಐ. ಸತೀಶ್, ಶಿವಮ ಮೊದಲಾದವರಿದ್ದದ್ದರು.










