ಹಾಸನ: ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ವಿಸ್ಮಯ ಕೀಟ ಪ್ರದರ್ಶನ ಹಾಗೂ ಕೀಟ ಮತ್ತು ಪಕ್ಷಿಗಳ ಛಾಯಾಚಿತ್ರ ಪ್ರದರ್ಶನವನ್ನು ನವೆಂಬರ್ 12ರಿಂದ 14ರವರೆಗೆ ಹಾಸನದ ರೆಡ್ ಕ್ರಾಸ್ ಭವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದೆ. ಪ್ರದರ್ಶನವು ಪ್ರತಿದಿನ ಬೆಳಗ್ಗೆ 9.00ರಿಂದ ಸಂಜೆ 6.00ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಗಳಾದ ಡಾ. ಕೆ.ಎಂ. ಹರೀಣ್ ಕುಮಾರ್ ಮತ್ತು ಶ್ರೀಮತಿ ಪೂರ್ಣಿಮಾ ಬಿ.ಆರ್, ಕಾರ್ಯನಿರ್ವಾಹಕ ಅಧಿಕಾರಿಗಳು ನೆರವೇರಿಸಲಿದ್ದಾರೆ. ಜಿಲ್ಲಾಧಿಕಾರಿ ಶ್ರೀಮತಿ ಲತಾ ಕುಮಾರಿ, ಐಎಎಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪ್ರೊ. ಟಿ.ಸಿ. ತಾರನಾಥ್ (ಉಪಕುಲಪತಿ- ಹಾಸನ ವಿಶ್ವವಿದ್ಯಾನಿಲಯ), ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಶಿಕ್ಷಣ ನಿರ್ದೇಶಕರಾದ ಡಾ. ಎ.ಎನ್. ಶಿವಕುಮಾರ್, ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎ. ಅಣ್ಣಯ್ಯ, ಜನತಾ ಮಾಧ್ಯಮ ಸಂಪಾದಕರಾದ ಮಂಜುನಾಥ ದತ್ತ, ಜಿಲ್ಲಾ ಪಕ್ಷಿ ವೀಕ್ಷಕರ ಸಂಘದ ಅಧ್ಯಕ್ಷ ಸುಬ್ಬಸ್ವಾಮಿ, ಚಿತ್ಕಲಾ ಫೌಂಡೇಶನ್ ಅಧ್ಯಕ್ಷ ಬಿ.ಎಸ್. ದೇಸಾಯಿ, ಪಕ್ಷಿ ವೀಕ್ಷಕರ ಸಂಘದ ಖಜಾಂಚಿ ಜಯೇಂದ್ರಕುಮಾರ್ ರವರು ಹಾಜರಾಗಲಿದ್ದಾರೆ ಎಂದು ಪ್ರದರ್ಶನದ ಸಂಯೋಜಕರಾದ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಡೀನ್ ಡಾ. ಮುನಿಸ್ವಾಮಿ ಗೌಡ ತಿಳಿಸಿದ್ದಾರೆ.
ಈ ಪ್ರದರ್ಶನದಲ್ಲಿ ವಿವಿಧ ಪ್ರಭೇದಗಳ ದುರ್ಗಮ ಹಾಗೂ ಆಕರ್ಷಕ ಕೀಟಗಳ ನೈಸರ್ಗಿಕ ವೈಶಿಷ್ಟ್ಯಗಳು, ಜೀವನಚಕ್ರ, ಕೃಷಿಯಲ್ಲಿ ಅವುಗಳ ಪಾತ್ರ ಮುಂತಾದ ಮಾಹಿತಿಗಳನ್ನು ಕೀಟಶಾಸ್ತ್ರ ವಿಭಾಗದ ಅಧ್ಯಾಪಕರು ಸಂದರ್ಶಕರಿಗೆ ತಿಳಿಸಲಿದ್ದಾರೆ. ಜೊತೆಗೆ ಪಕ್ಷಿಗಳ ಬದುಕು ಹಾಗೂ ವಾಸಸ್ಥಾನದ ವೈವಿಧ್ಯತೆಯನ್ನು ಒಳಗೊಂಡ ಛಾಯಾಚಿತ್ರ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ.
“ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಅಪರೂಪದ ಉಚಿತ ಪ್ರದರ್ಶನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು” ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ ಶಾಖೆಯ ಸಭಾಪತಿ ಹೆಚ್.ಪಿ. ಮೋಹನ್ ಕೋರಿದ್ದಾರೆ.










