- (Sakaleshpur)ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಡಿವೈಎಸ್ಪಿ ನಡೆ ಖಂಡಿಸಿ, ಕುಶಾಲನಗರ ಚಲೋಗೆ ಅನುಮತಿ ನೀಡುವಂತೆ ಒತ್ತಾಯಿಸಿದರು.
Sakaleshpur|ಸಕಲೇಶಪುರ, ಜೂನ್ 1: ಸಕಲೇಶಪುರ ಪೊಲೀಸ್ ಉಪಾಧೀಕ್ಷರ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಅವರು ಡಿವೈಎಸ್ಪಿ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರೊಂದಿಗೆ ಪೊಲೀಸರು ನಡೆದುಕೊಂಡ ರೀತಿಯನ್ನು ಖಂಡಿಸಿ, ಯಾವುದೇ ಸಮಸ್ಯೆ ಇದ್ದರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದೇಶ್ ನಾಗೇಂದ್ರ, ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಹ ಯಾವುದೇ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಳ್ಳಬಾರದು ಎಂದು ಆಗ್ರಹಿಸಿದರು. ‘ಕುಶಾಲನಗರ ಚಲೋ’ ಕಾರ್ಯಕ್ರಮಕ್ಕೆ ಅನುಮತಿ ಪಡೆಯಲು ತೆರಳಿದ್ದ ವೇಳೆ ನಡೆದ ಘಟನೆಗಳಿಂದ ಹಿಂದೂ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ ಎಂದು ಆರೋಪಿಸಿದರು.
“ಪ್ರಶ್ನೆ ಮಾಡುವವರನ್ನು ಬೆದರಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ನಮ್ಮ ಕಾರ್ಯಕರ್ತರು ಯಾವುದೇ ಬೆದರಿಕೆಗೆ ಜಗ್ಗುವುದಿಲ್ಲ. ಸಂಘಟನೆ ವಿಚಾರ ಬಂದರೆ ಹೋರಾಟಕ್ಕೂ ನಾವು ಸಿದ್ಧರಾಗಿದ್ದೇವೆ,” ಎಂದು ಅವರು ಎಚ್ಚರಿಕೆ ನೀಡಿದರು.
ಮುಂದಿನ ದಿನಗಳಲ್ಲಿ ಕಾರ್ಯಕರ್ತರೊಂದಿಗೆ ಪೊಲೀಸ್ ಅಧಿಕಾರಿಗಳು ಸಂಯಮ ಮತ್ತು ಗೌರವದಿಂದ ವರ್ತಿಸಬೇಕು ಎಂದು ಒತ್ತಾಯಿಸಿದ ಅವರು, ಗುರುವಾರ ನಡೆಯಲಿರುವ ‘ಕುಶಾಲನಗರ ಚಲೋ’ ಕಾರ್ಯಕ್ರಮಕ್ಕೆ ಅಗತ್ಯ ಅನುಮತಿ ನೀಡುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ, ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭಾಗವಹಿಸಿ ಡಿವೈಎಸ್ಪಿ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.










