ಚನ್ನರಾಯಪಟ್ಟಣ: ತಾಲ್ಲೂಕಿನ ಸಂತೇಶಿವರ ಗೇಟ್ ಬಳಿ ಇಟ್ಟಿಗೆ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು ಜಾನುವಾರು ಮೆಯಿಸುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಲಾರಿ ಕ್ಲೀನರ್ ಗಾಯಗೊಂಡಿರುತ್ತಾನೆ.
ತಾಲ್ಲೂಕಿನ ಸಂತೇಶಿವರ ಗ್ರಾಮದ ಬೋರಯ್ಯ(60)ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ. ಲಾರಿಯ ಕ್ಲೀನರ್ ಗುರುಮೂರ್ತಿ ಗಾಯಗೊಂಡಿರುವ ವ್ಯಕ್ತಿ.
ಹುಳಿಯಾರ್ ಕೆಂಕೆರೆ ವ್ಯಾಪ್ತಿಯಿಂದ ಸಂತೇಶಿವರ ಗ್ರಾಮಕ್ಕೆ ಲಾರಿಯಲ್ಲಿ ಕೆಂಪು(ನಂಬರ್) ಇಟ್ಟಿಗೆಗಳನ್ನು ಸಾಗಿಸುತ್ತಿದ್ದ ವೇಳೆ ರಸ್ತೆ ಕಡೆಗೆ ವಾಲಿರುವ ಮರದ ಕೊಂಬೆಯನ್ನು ತಪ್ಪಿಸುವ ಸಲುವಾಗಿ ಲಾರಿಯನ್ನು ಚಾಲಕನು ರಸ್ತೆ ಬದಿಗೆ ತಿರುಗಿಸಿದ್ದಾನೆ.
ವೇಗದಲ್ಲಿದ್ದ ಲಾರಿಯೂ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿದೆ. ಅಲ್ಲಿಗೆ ರಸ್ತೆ ಬದಿಯಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದ ಬೋರಯ್ಯ ಲಾರಿಯ ಕೆಳಭಾಗಕ್ಕೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.
ಘಟನೆ ಸಂಭವಿಸುತ್ತಿದ್ದಂತೆಯೇ ಲಾರಿ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ ವ್ಯಕ್ತಿ ಸಿಲುಕಿರುವುದನ್ನು ನೋಡಲು ಬಂದ ಕ್ಲೀನರ್ ಗುರುಮೂರ್ತಿ ಇಟ್ಟಿಗೆ ನಡುವೆ ಕಾಲುಗಳು ಸಿಲುಕಿಕೊಂಡು ಗಾಯಗೊಂಡಿದ್ದಾನೆ.
ತಕ್ಷಣ ಸ್ಥಳೀಯರು ಕ್ರೇನ್ ಮೂಲಕ ಲಾರಿಯನ್ನು ಮೇಲೆತ್ತಿ ಬೋರಯ್ಯ ಅವರ ಮೃತ ದೇಹವನ್ನು ಚನ್ನರಾಯಪಟ್ಟಣ ಸರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು ಗಾಯಗೊಂಡಿರುವ ಗುರುಮೂರ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










