ಚನ್ನರಾಯಪಟ್ಟಣ: ಧರ್ಮದ ಹಾದಿಯಲ್ಲಿ ನಡೆಯದೆ ಮನುಕುಲವು ಮುಕ್ತಿ ಪಡೆಯಲು ಸಾಧ್ಯವಿಲ್ಲ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕುಂದೂರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಅಮಾವಾಸ್ಯೆ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಹೋಮ, ಹವನ ಹಾಗೂ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಮಾತನಾಡಿ, ಧರ್ಮ ಕಾರ್ಯಗಳಿಂದ ಬದುಕಿಗೆ ಮುಕ್ತಿ ಲಭಿಸಲಿದೆ ಎಂದು ಆಶೀರ್ವಚನ ನೀಡಿದರು.
ಭಗವಂತನ ಅನುಗ್ರಹವಿಲ್ಲದೆ ಈ ಭೂಮಿಯ ಮೇಲೆ ಒಂದು ಹುಲ್ಲು ಕಡ್ಡಿಯು ಸಹ ಅಲುಗಾಡಲು ಸಾಧ್ಯವಿಲ್ಲ. ಆಧುನಿಕವಾಗಿ ಜಗತ್ತು ಅದಷ್ಟೇ ಮುಂದುವರಿದರು ಸಹ ಧಾರ್ಮಿಕ ಭಾವನೆಗೆ ಧಕ್ಕೆಯಾಗಿಲ್ಲ. ಯಾಕೆಂದರೆ ಆಧುನಿಕ ವ್ಯವಸ್ಥೆಯು ಧರ್ಮದ ತಳಹದಿಯ ಮೇಲೆಯೇ ನಡೆಯುತ್ತಿದೆ ಎಂದರು.
ಒಳ್ಳೆಯ ಮನಸ್ಸಿನಿಂದ ದೇವರನ್ನು ಆರಾಧಿಸಿದರೆ ಯಾವುದೇ ಸಂಕಷ್ಟದ ಸಮಯದಲ್ಲೂ ಸಹ ನಮ್ಮನ್ನು ಕೈ ಬಿಡುವುದಿಲ್ಲ. ಧರ್ಮ ಕಾರ್ಯದಲ್ಲಿ ತೊಡಗಿದರೆ ಬದುಕಿನಲ್ಲಿ ಶಾಂತಿ, ನೆಮ್ಮದಿ ಹಾಗೂ ಮುಕ್ತಿ ಸಿಗಲಿದೆ ಎಂದು ತಿಳಿಸಿದರು.
ಅಮಾವಾಸ್ಯೆ ಪೂಜೆಯ ಹಿನ್ನೆಲೆ ದೇಗುಲಕ್ಕೆ ಹೂವಿನ ಚಪ್ಪರ ಹಾಕಲಾಗಿದ್ದು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಅಧಿದೇವತೆ ಶ್ರೀ ಮೆಳಿಯಮ್ಮ ದೇವಿಗೆ ವಿಶೇಷ ಅಲಂಕಾರ ಜರಗಿದ್ದು ಶ್ರೀ ಶಂಭುನಾಥ ಸ್ವಾಮೀಜಿಯವರು ಮುತ್ತಿನ ಆರತಿ ಬೆಳಗಿಸಿದರು. ನಂತರ ಹೋಮ, ಹವನ ಹಾಗೂ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಪಾಲ್ಗೊಂಡಿದ್ದ ಭಕ್ತರು ಆಶೀರ್ವಚನದ ಬಳಿಕ ಅಮ್ಮನವರ ದರ್ಶನ ಪಡೆದು ಪುನೀತರಾದರು.










