ಹೊಳೆನರಸೀಪುರ: ಶ್ರೀ ಮಹಾ ಗಣಪತಿ ಮಹೋತ್ಸವ ಸೇವಾ ಸಮಿತಿಯ 68 ನೇ ವರ್ಷದ ಪೂಜಾ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಸಾರ್ವಜನಿಕ ಸಮುದಾಯ ಭವನ (ಗಣಪತಿ ಪೆಂಡಾಲಿನಲ್ಲಿ) ಪ್ರತಿಷ್ಠಾಪನೆ ಮಾಡಲಾಗಿದ್ದ ಶ್ರೀ ಮಹಾ ಗಣಪತಿಯವರ ವಿಸರ್ಜನಾ ಮಹೋತ್ಸವ ಸಾಂಪ್ರದಾಯಿಕವಾಗಿ ವಿವಿಧ ಪೂಜಾ ಕೈಂಕರ್ಯ ಕೈಗೊಳ್ಳುವ ಮೂಲಕ ನಡೆಯಿತು.
ಶ್ರೀ ಮಹಾಗಣಪತಿ ಅವರನ್ನು ಸಂಜೆ ಹೂವಿನಿಂದ ಅಲಂಕರಿಸಿದ ಭವ್ಯ ವಾಹನದಲ್ಲಿರಿಸಿ, ಮಂಗಳ ವಾದ್ಯಗಳೊಂದಿಗೆ, ವೀರಗಾಸೆ, ಚಂಡೆ ಮುದ್ದಳೆ, ಕೀಲುಕುದುರೆ, ಕೋಲಾಟ, ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನದ ಜೊತೆಯಲ್ಲಿ, ಕಣ್ಮನ ಸೆಳೆಯುವ ಪಟಾಕಿಯೊಂದಿಗೆ ಸೇವಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಭಕ್ತಾದಿಗಳ ಉಪಸ್ಥಿತಿಯಲ್ಲಿ ಸಕಲ ರಾಜ ಮರ್ಯಾದೆಯೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಕೊಂಡೊಯ್ಯಲಾಯಿತು.
ಆಗಾಗ ವರುಣ ಸಿಂಚನವಾದರೂ ಭಕ್ತಾದಿಗಳು ವಿಚಲಿತರಾಗದೆ ಗಣಪತಿಯೊಂದಿಗೆ ಸಾಗಿದರು. ಕಳೆದ ಆ27 ರಂದು ಪ್ರತಿಷ್ಠಾಪನೆ ಮಾಡಿದ್ದ ಮಹಾಗಣಪತಿಯನ್ನು ನಿನ್ನೆ ವಿಸರ್ಜಿಸಲಾಯಿತು.ಒಂದು ತಿಂಗಳ ಕಾಲ ಗಣಪತಿ ಆಸ್ಥಾನ ಮಂಟಪದ ಸಾಂಸ್ಕೃತಿಕ ವೇದಿಕೆಯಲ್ಲಿ ಕಲಾವಿದರು ತಮ್ಮ ಕಲಾ ಪ್ರದರ್ಶನ ಅಭಿವ್ಯಕ್ತಿಗೊಳಿಸಿ ಕಲಾಭಿಮಾನಿಗಳ ಮನಸೂರೆಗೊಂಡರು.
ಇಂದಿನ ಪೂಜಾ ಕೈಂಕರ್ಯಗಳನ್ನು ವೇದ ಬ್ರಹ್ಮ ಶ್ರೀಷಾಚಾರ್ ಮತ್ತವರ ಸಂಗಡಿಗರು ನಡೆಸಿಕೊಟ್ಟರು. ಇಂದು ಸಾವಿರಾರು ಜನ ಭಕ್ತಾದಿಗಳಿಗೆ ಬೃಹತ್ ಅನ್ನ ಪ್ರಸಾದ ವಿತರಣೆ ಮಾಡಿದರು.ತೆಪ್ಪೋತ್ಸವದ ಮೂಲಕ ಪವಿತ್ರ ಹೇಮಾವತಿ ನದಿಯಲ್ಲಿ ಗಣೇಶನನ್ನು ವಿಸರ್ಜಿಸಲಾಯಿತು.
ಮಹಾಗಣಪತಿ ಮಹೋತ್ಸವ ಸೇವಾ ಸಮಿತಿ ಗೌರವಾಧ್ಯಕ್ಷ ಸಮಾಜ ಸೇವಕ ಟಿ.ಶಿವಕುಮಾರ್, ಸಮಿತಿ ಅಧ್ಯಕ್ಷರು ಮತ್ತು ಪುರಸಭೆ ಅಧ್ಯಕ್ಷ ಹೆಚ್.ಕೆ.ಪ್ರಸನ್ನ, ಕಾರ್ಯಾಧ್ಯಕ್ಷ ಹೆಚ್, ಎಸ್.ಪುಟ್ಟ ಸೋಮಪ್ಪ, ಕೆ.ಶ್ರೀಧರ್, ಉಪಾಧ್ಯಕ್ಷರಾದ ಎ.ಜಗನ್ನಾಥ್, ಆಕ್ರಾಂತ್ ರವಿಕುಮಾರ್, ಹೆಚ್.ಎಸ್.ಸುದರ್ಶನ್, ಪ್ರಧಾನ ಕಾರ್ಯದರ್ಶಿ ಜಿ.ಕೆ.ಸುಧಾ ನಳಿನಿ ದೊಡ್ಡ ಮಲ್ಲೇಗೌಡ, ವೈ.ವಿ.ಚಂದ್ರಶೇಖರ್, ಸಹ ಕಾರ್ಯದರ್ಶಿ ಹೆಚ್.ವಿ.ಸುರೇಶ್ ಕುಮಾರ್, ಹೆಚ್.ಟಿ.ನರಸಿಂಹ ಶೆಟ್ಟಿ, ಖಜಾಂಚಿ ಎಸ್.ಗೋಕುಲ್,ಪುರಸಭೆ ಮುಖ್ಯಾಧಿಕಾರಿ ಯು.ಎನ್.ಶಿವ ಶಂಕರ್, ವಿ.ಎ.ಕೃಷ್ಣ, ನಗರ ಪೊಲೀಸ್ ಠಾಣೆ ಪಿ.ಎಸ್.ಐ.ಅಭಿಜಿತ್,ಮತ್ತು ಎಲ್ಲಾ ಸಮಿತಿ ಸದಸ್ಯರು ಇದ್ದರು.










