ಹಾಸನ : ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಪ್ರತಿವರ್ಷ ಅದ್ಧೂರಿಯಾಗಿ ನಡೆಯುವ ಅರಕಲಗೂಡು ದಸರಾ ಮಹೋತ್ಸವ ನಿನ್ನೆ ಭಕ್ತಿಭಾವದಿಂದ ಆರಂಭಗೊಂಡಿದೆ. ವಿಜಯದಶಮಿ ದಿನದ ಪ್ರಮುಖ ಕಾರ್ಯಕ್ರಮಕ್ಕೆ ಸಾಹಿತ್ಯ ಲೋಕದ ಗಣ್ಯರು ಭಾಗಿಯಾಗಲಿದ್ದಾರೆ.
ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ. ಮಂಜು, ಕೊಡಗು ಜಿಲ್ಲೆ ಮಡಿಕೇರಿಯ ನೂತನ ಬಡಾವಣೆಯಲ್ಲಿರುವ ದೀಪಾ ಬಸ್ತಿ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಅನುವಾದಕಿ ದೀಪಾ ಬಸ್ತಿ ಅವರಿಗೆ ವಿಶೇಷ ಆಹ್ವಾನ ನೀಡಿದರು.
ಬರಹಗಾರ್ತಿ, ಪತ್ರಕರ್ತೆ ಹಾಗೂ ಸಾಹಿತ್ಯ ಅನುವಾದಕಿ ದೀಪಾ ಬಸ್ತಿ, ಲೇಖಕಿ ಭಾನು ಮುಷ್ತಾಕ್ ಅವರ ಹಾರ್ಟ್ ಲ್ಯಾಂಪ್ (ಎದೆಯ ಹಣತೆ) ಕೃತಿಯನ್ನು ಆಂಗ್ಲಕ್ಕೆ ಅನುವಾದಿಸಿ, ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಗಳಿಸಿದ ಮೊದಲ ಕನ್ನಡಿಗರಾಗಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ, ಮೈಸೂರು ದಸರಾ ಉದ್ಘಾಟನಾ ಸಮಾರಂಭವನ್ನು ಸಾಹಿತಿ ಭಾನು ಮುಷ್ತಾಕ್ ಅವರು ನೆರವೇರಿಸಿದ್ದರು. ಈಗ ದೀಪಾ ಬಸ್ತಿ ಅರಕಲಗೂಡು ದಸರಾ ವಿಜಯದಶಮಿ ಸಮಾರಂಭದಲ್ಲಿ ಭಾಗಿಯಾಗಲಿರುವುದು ಉತ್ಸವಕ್ಕೆ ವಿಶೇಷತೆ ತಂದಿದೆ.










