ಹಾಸನ: ತಾಲ್ಲೂಕಿನ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಕಳೆದ ಶುಕ್ರವಾರ ರಾತ್ರಿ ನಡೆದ ದುರಂತಕ್ಕೆ ಪೊಲೀಸ್ ವೈಫಲ್ಯವೇ ಕಾರಣ ಎಂದು ಮತ್ತೆ ಆರೋಪಿಸಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಘಟನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಅವರು ಹೇಳಿಕೆಯನ್ನೂ ನೋಡಿದ್ದೇನೆ. ಆದರೆ ನನ್ನ ಪ್ರಕಾರ ಪೊಲೀಸ್ ಇಲಾಖೆ ವೈಫಲ್ಯದಿಂದಲೇ ದುರಂತ ಘಟಿಸಿದೆ ಎಂದು ದೂರಿದರು.
ವಿದ್ಯಾರ್ಥಿಗಳು ಸೇರಿ ಹತ್ತು ಮಂದಿ ಸಾವನ್ನಪ್ಪಿದ್ದಾರೆ. ಹಾಗಾಗಿ ಹೆಚ್ಚು ಪರಿಹಾರ ಕೊಡಿ ಎಂದು ಒತ್ತಾಯಿಸುತ್ತಿದ್ದೇನೆ. ಪೊಲೀಸ್ ಇಲಾಖೆ ಸರ್ಕಾರದ ಅಡಿಯಲ್ಲಿ ಬರುತ್ತೆ ಹಾಗಾಗಿ ಇದು ಸರ್ಕಾರದ ವೈಫಲ್ಯವೂ ಕೂಡ ಎಂದು ಬೊಟ್ಟು ಮಾಡಿದರು.
ಸರ್ಕಾರವೇ ಒಂದು ತಂಡ ಕಳುಹಿಸಲಿ ಎಂದು ಆಗ್ರಹಿಸಿದ ರೇವಣ್ಣ, ಗಣಪತಿ ಬಿಡುವಾಗ ಐನೂರು ಮೀಟರ್ ಹಿಂದೆ ಬ್ಯಾರಿಕೇಡ್ ಹಾಕಿ ಇಬ್ಬರು ಪೊಲೀಸರನ್ನು ಹಾಕಬೇಕಿತ್ತು. ಮೆರವಣಿಗೆ ಹೋಗುವವರೆಗೂ ಟ್ರಾಫಿಕ್ ಬಂದ್ ಮಾಡಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ, ಮಾಡಿದ್ದರೆ ಹತ್ತು ಜನ ಸಾವನ್ನಪ್ಪುವುದನ್ನು ತಪ್ಪಿಸಬಹುದಿತ್ತು ಎಂದರು.
ದುರಂತದ ಬಗ್ಗೆ ತನಿಖೆ ಏನಾಗಿದೆ ಸಾರ್ವಜನಿಕರಿಗೆ ತಿಳಿಸಿ, ಎಲ್ಲರಿಗೂ ವಿಮೆ ಹಣ ಬರುವಂತೆ ಮಾಡಬೇಕು ಎಂದು ಒತ್ತಾಯಿಸಿದರು.ಈ ಘಟನೆಯಲ್ಲಿ ಯಾರದ್ದು ತಪ್ಪಿದೆ, ಪೊಲೀಸ್ ಇಲಾಖೆಯ ವೈಫಲ್ಯದಿಂದ ದುರಂತ ಆಗಿದೆ, ಇನ್ನೊಬ್ಬ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ, ಗೃಹ ಸಚಿವರೇ ಸ್ಥಳಕ್ಕೆ ಬಂದು ಪರಿಶೀಲಿಸಲಿ ಎಂದು ಆಗ್ರಹಿಸಿದರು.
ಐದಾರು ಸಾವಿರ ಜನ ಸೇರುತ್ತಾರೆ, ನಾಲ್ಕು ಸಾವಿರ ವಿದ್ಯಾರ್ಥಿಗಳಿರುವ ಗ್ರಾಮ, ಹೀಗಾಗಿ ಮೊದಲೇ ಎಸ್ಪಿ ಅವರು ಸಭೆ ನಡೆಸಬೇಕಿತ್ತು, ಇದೇ ವೇಳೆ ಅಮಾಯಕರನ್ನು ಕರೆತಂದು ಪೊಲೀಸರು ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ರೇವಣ್ಣ, ದುದ್ದ ಮಹಿಳಾ ಪಿಎಸ್‌ಐ ಅಮಾಯಕನ ಶರ್ಟ್ ಬಿಚ್ಚಿಸಿ ಹೊಡೆದಿದ್ದಾರೆ ಎಂದು ದೂರಿದರು.
ಒಂದು ವಾರಗಳ ಗಡುವು ನೀಡಿದ್ದೇನೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದಿದ್ದರೆ ನಮ್ಮ ಶಾಸಕರೆಲ್ಲಾ ಕೂಡಿ ಚರ್ಚಿಸಿ ಮುಂದೆ ಏನು ಮಾಡಬೇಕೆಂದು ತೀರ್ಮಾನಿಸುತ್ತೇನೆ ಎಂದು ರೇವಣ್ಣ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮದ್ಯದಂಗಡಿ ತೆರೆದಿದ್ದಾರೆ, ನಿಯಮಗಳನ್ನು ಉಲ್ಲಂಘಿಸಿ ಲೈಸೆನ್ಸ್ ನೀಡಿದ್ದಾರೆ ಎಂದು ಆರೋಪಿಸಿದ ಅವರು, ಹೆಚ್ಚು ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಇದೇ ವೇಳೆ ತುರ್ತಾಗಿ ಪರಿಹಾರ ಘೋಷಿಸಿದ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿದರು.










