11 C
Munich
Home News ಹಾಸನ: ಸೆ.19 ರಂದು ವಿಶ್ವ ಅಂಗಾಂಗ ದಾನ ದಿನದ ಅಂಗವಾಗಿ ಜಾಥಾ

ಹಾಸನ: ಸೆ.19 ರಂದು ವಿಶ್ವ ಅಂಗಾಂಗ ದಾನ ದಿನದ ಅಂಗವಾಗಿ ಜಾಥಾ

ಹಾಸನ: ಮಂಡ್ಯ ಜಿಲ್ಲೆ ಬಿಜಿಎಸ್ ನಗರದಲ್ಲಿ ಇದೇ ತಿಂಗಳ 19ರಂದು ವಿಶ್ವ ಅಂಗಾಂಗದಾನ ದಿನದ ಪ್ರಯುಕ್ತ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಆದಿಚುಂಚನಗಿರಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಧರ್ಮೇಂದ್ರ ತಿಳಿಸಿದರು.

ಇಂದು ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ನೀಡಿದ ಅವರು, ಭೈರವೈಕ್ಯ ಪರಮಪೂಜ್ಯ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೃಪಾಶೀರ್ವಾದರೊಂದಿಗೆ ಈ ಜಾಥಾದ ಮೂಲಕ ಅಂಗಾಂಗದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುವುದು.

ಅಂದು ಬೆಳಗ್ಗೆ7ಗಂಟೆಗೆ ಜಾಥಾ ಶುರುವಾಗಲಿದೆ. ಶ್ರೀ ಮಠದ ಡಾ.ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ವಹಿಸಲಿದ್ದಾರೆ. ಹಾಸನ ಮಹಾಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠಗಳ ಎಲ್ಲ ಮಠಾಧೀಶರು, ರಾಜಕೀಯ, ಸಿನಿಮಾ ಕ್ಷೇತ್ರದವರು, ಕ್ರೀಡಾಪಟುಗಳು ಹಾಗೂ ಗಣ್ಯಾತಿಗಣ್ಯರು ಭಾಗಿಯಾಗಲಿದ್ದಾರೆ ಎಂದು ವಿವರಿಸಿದರು.

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸಲೀಂ, ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ, ನಟ ಧ್ರುವ ಸರ್ಜಾ, ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳ ಶಾಸಕರು, ಮಾಜಿ ಶಾಸಕರು ಜಾಥಾದಲ್ಲಿ ಭಾಗಿಯಾಗಲಿದ್ದಾರೆ. ಶ್ರೀ ಕ್ಷೇತ್ರದಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 8ಸಾವಿರ ವಿದ್ಯಾರ್ಥಿಗಳು ಸೇರಿದಂತೆ ಅಂದಾಜು 15 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ. ಸುಮಾರು 5 ಕಿಮೀ ಜಾಥಾ ಸಂಚರಿಸಲಿದೆ ಎಂದು ವಿವರಿಸಿದರು.

ಇದರ ಒಟ್ಟಾರೆ ಉದ್ದೇಶ ನಮ್ಮ ಜೀವ ಮತ್ತೊಬ್ಬರಿಗೆ ಆಸರೆ ಎಂಬ ಘೋಷ ವಾಕ್ಯದಡಿ ಆದಿನಾಥ ರಸ್ತೆಯಿಂದ ಬಿಜಿಎಸ್ ಪ್ರತಿಮೆಯವರೆಗೆ ಸಂಚರಿಸಿಅಂಗಾಂಗ ದಾನದ ಮೂಲಕ ಜಾಗೃತಿ ಮೂಡಿಸಲಿದೆ ಎಂದ ಅವರು, ಕಿಡ್ನಿ, ಲಿವರ್, ಲಂಗ್ಸ್ ಮೊದಲಾದ ಅಂಗಾಂಗಳನ್ನು ಶೀಘ್ರ ದಾನ ಮಾಡಿದರೆ ಮತ್ತೊಬ್ಬರಿಗೆ ವರದಾನ ಆಗಲಿದೆ ಎಂದರು. ಎಲ್ಲರೂ ಭಾಗಿಯಾಗುವ ಮೂಲಕ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ ಹಾಸನ ಬಿಜಿಎಸ್ ಕಾಲೇಜಿನ ಪ್ರಾಂಶುಪಾಲರಾದ ಮೋಹನ್, ಪ್ರೌಢಶಾಲಾ ವಿಭಾಗದ ದರ್ಶನ, ಶ್ರೀ ಮಠದ ಮಾಧ್ಯಮ ಸಂಯೋಜಕ ಬಿ.ಆರ್.ಬೊಮ್ಮೇಗೌಡ, ಬಿಜಿಎಸ್ ಆಸ್ಪತ್ರೆಯ ಫಾರ್ಮಸಿಸ್ಟ್ ನಾಗರಾಜ್ ಇದ್ದರು.

error: Content is protected !!