ಬೇಲೂರು: ಹಿರಿಯ ಸಾಹಿತಿ, ಸಂಶೋಧಕ ಹಾಗೂ ಕನ್ನಡ ಸಾಹಿತ್ಯ ಸೇವೆಯಲ್ಲಿ ತಮ್ಮ ವಿಶಿಷ್ಟ ಕೊಡುಗೆ ನೀಡುತ್ತಿರುವ ಡಾ. ಶ್ರೀವತ್ಸ ಎಸ್. ವಟಿ ಅವರಿಗೆ ಡಿ.ಟಿ. ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ ಸಾಹಿತ್ಯ ದತ್ತಿ ಪ್ರಶಸ್ತಿಗೆ ಕೇಂದ್ರ ಕಸಾಪ ಆಯ್ಕೆ ಮಾಡಲಾಗಿದ್ದು ಇಡೀ ತಾಲ್ಲೂಕಿಗೆ ಹೆಮ್ಮೆ ತರುವ ವಿಷಯವಾಗಿದೆ ಎಂದು ಶಾಸಕ ಹೆಚ್ ಕೆ ಸುರೇಶ್ ಹರ್ಷ ವ್ಯಕ್ತಪಡಿಸಿದರು.
ಅವರ ನಿವಾಸದಲ್ಲಿ ಇಂದು ಶ್ರೀ ವತ್ಸ ಎಸ್ ವಟಿ ಅವರನ್ನು ಅಭಿನಂಧಿಸಿ ಮಾತನಾಡಿದ ಶಾಸಕ ಹೆಚ್.ಕೆ. ಸುರೇಶ್ ಬೇಲೂರು ನಾಡಿಗೆ ಸಾಹಿತ್ಯ-ಸಂಸ್ಕೃತಿಯ ಪರಂಪರೆ ಅಪಾರವಾಗಿದೆ.ಇಲ್ಲಿ ಹುಟ್ಟಿ ಬೆಳೆದ ಹಿರಿಯ ಸಾಹಿತಿಗಳು ಕನ್ನಡ ಸಾಹಿತ್ಯದ ಸಮೃದ್ಧಿಕರಣಕ್ಕೆ ತಮ್ಮ ಜೀವನವನ್ನೇ ಅರ್ಪಿಸಿದ್ದಾರೆ.
ಇಂತವರ ಪೈಕಿ ಎಲೆಮರೆಕಾಯಿಯಂತಿರುವ ಡಾ. ಶ್ರೀವತ್ಸ ಎಸ್. ವಟಿ ಅವರು ತಮ್ಮ ನಿರಂತರ ಸಾಹಿತ್ಯ ಸೇವೆಯಿಂದ ಹೊಸ ಪೀಳಿಗೆಯ ಬರಹಗಾರರಿಗೆ ಪ್ರೇರಣೆಯಾದ ವ್ಯಕ್ತಿ. ಇಂತಹ ತಲೆಮಾರಿನ ವಿದ್ವಾಂಸರು ನಮ್ಮ ಸಮಾಜದ ಶ್ರೇಷ್ಠ ಆಸ್ತಿಯಂತೆ. ಅವರಿಗೆ ಈ ಪ್ರಶಸ್ತಿ ಸಿಕ್ಕಿರುವುದು ಬೇಲೂರಿನ ಹೆಮ್ಮೆ, ಎಂದು ಅಭಿಪ್ರಾಯಪಟ್ಟರಲ್ಲದೆ ಪಿ.ಕೆ. ನಾರಾಯಣ ಸಾಹಿತ್ಯ ದತ್ತಿ ಪ್ರಶಸ್ತಿ ಎಂಬ ಹೆಸರೇ ಸಾಕ್ಷಿ – ಅಲ್ಲಿ ಕೇವಲ ಬರಹವಲ್ಲ, ಸಾಹಿತ್ಯದ ಜವಾಬ್ದಾರಿ, ಮೌಲ್ಯಗಳು, ಮತ್ತು ಶ್ರದ್ಧೆ ಅಡಕವಾಗಿದೆ.
ಇಂದು ಡಾ. ಶ್ರೀವತ್ಸ ಎಸ್ ವಟಿ ಅವರಿಗೆ ಈ ಪ್ರಶಸ್ತಿ ಸಿಕ್ಕಿರುವುದು ಬೇಲೂರಿಗೇ ಗೌರವ ತಂದಿದೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಕೃತಿಗಳನ್ನು ಬರೆಯಲಿ, ಕನ್ನಡ ಸಾಹಿತ್ಯ ಲೋಕಕ್ಕೆ ಹಸಿರು ನೆನಪುಗಳನ್ನು ಬರೆದಿಡಲಿ ಎಂಬುದು ನನ್ನ ಹಾರೈಕೆ,” ಎಂದರಲ್ಲದೆ ಎರಡು ತಿಂಗಳ ಹಿಂದಷ್ಟೇ ಆರ್ಯಭಟ ಪ್ರಶಸ್ತಿ ಪಡೆಯುವುದರ ಜೊತೆಯಲ್ಲಿ ನಮ್ಮ ನಾಡಿನ ಸಂಕೇತವಾದ ಹಲ್ಮಿಡಿ ಶಾಸಮವನ್ನು ನಮ್ಮ ಸಾಂಸ್ಕೃತಿಕ ರಾಯಭಾರಿ ಕೆಂದ್ರ ಕಸಾಪ ಗೌರವ ಕಾರ್ಯದರ್ಶಿ ಹೆಚ್ ಬಿ ಮದನ್ ಗೌಡ ಅವರ ಜೊತೆ ಒಗ್ಗೂಡಿ ಶಿಲಾ ಶಾಸನ ವನ್ನು ಇಡಿ ರಾಜ್ಯಕ್ಕೆ ಪಸರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ. ಶಿವರಾಜ್,ಪತ್ರಕರ್ತ ಗಣೇಶ್,ಶ್ರೀಮತಿ ನವರತ್ನ ವಟಿ,ಖ್ಯಾತ ಭರತನಾಟ್ಯ ಕಲಾವಿದೆ ದಿವ್ಯಶ್ರೀ ಉದಯ್, ಪುರಸಭೆ ನೌಕರ ಬಿ. ಆರ್. ಕುಮಾರ್ ಇದ್ದರು.










