ಹಾಸನ:ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ತಣ್ಣೀರುಹಳ್ಳ ಶ್ರೀಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪಕರಾದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ 110ನೇ ಜನ್ಮದಿನಾಚರಣೆ ಮತ್ತು ತಣ್ಣೀರುಹಳ್ಳಮಠ ಶ್ರೀಗಳ ದತ್ತಿ ಕಾರ್ಯಕ್ರಮ ಜರುಗಿತು.
“ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಶರಣರ ವಚನ ಸಾಹಿತ್ಯವು ಇಡೀ ಮನುಕುಲಕ್ಕೆ ಬೆಳಕಾಗಬೇಕು. ಬಸವಾದಿ ಶರಣರು ಸಮಾಜದಲ್ಲಿ ಅಡಗಿದ್ದ ಅಸಮಾನತೆ, ಜಾತಿ ವೈಷಮ್ಯಗಳನ್ನು ದೂರ ಮಾಡಿ ಸಮಾನತೆಯ ಸಂದೇಶ ನೀಡಿದ ಮಹಾನ್ ಕ್ರಾಂತಿಕಾರರು. ಅವರ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜ ಸುಧಾರಣೆ ಸಾಧ್ಯ,”
ಎಂದು ಅವರು ಕರೆ ನೀಡಿದರು.
ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಪ್ರಸ್ತಾವನೆ ಮಾಡಿ, “ವಚನದ ಸಂದೇಶಗಳಿಂದ ಮಾತ್ರ ಮಾನವನ ಬದುಕು ಉಜ್ವಲಗೊಳ್ಳುತ್ತದೆ. ನುಡಿದಂತೆ ನಡೆ, ನಡೆದಂತೆ ನುಡಿ ಎಂಬ ಸಂದೇಶವನ್ನೇ ಬದುಕಿನ ಗುರಿ ಮಾಡಿಕೊಳ್ಳಬೇಕು,”
ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ವಿಶ್ವ ವೀರಶೈವ–ಲಿಂಗಾಯತ ಮಹಾ ವೇದಿಕೆ ರಾಜ್ಯ ಉಪಾಧ್ಯಕ್ಷ ಸುತ್ತೂರು ಬಿ.ಅರ್. ಪಂಚಾಕ್ಷರಿ ದತ್ತಿ ಉಪನ್ಯಾಸ ನೀಡಿದರು.ಕಾರ್ಯಕ್ರಮವನ್ನು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಮಠದ ನಿರ್ದೇಶಕರು ಶರಣ ಸೋಮನಾಥ ಅಧ್ಯಕ್ಷತೆ ವಹಿಸಿದ್ದರು.ಹಾಸನ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನುಮಂತಪುರ ಪುಟ್ಟರಾಜು ಕಾರ್ಯಕ್ರಮ ಉದ್ಘಾಟಿಸಿದರು.










