8.9 C
Munich
Home News ಹಾಸನ: ಸಾಲ ವಸೂಲಿಗೆ ಜಮೀನು ಹರಾಜಿಗೆ ಮುಂದಾದ ಬ್ಯಾಂಕ್: ರೈತ ಸಂಘದಿಂದ ಹಾಸನದಲ್ಲಿ ಪ್ರತಿಭಟನೆ

ಹಾಸನ: ಸಾಲ ವಸೂಲಿಗೆ ಜಮೀನು ಹರಾಜಿಗೆ ಮುಂದಾದ ಬ್ಯಾಂಕ್: ರೈತ ಸಂಘದಿಂದ ಹಾಸನದಲ್ಲಿ ಪ್ರತಿಭಟನೆ

ಹಾಸನ: ಬ್ಯಾಂಕ್‌ನವರು ರೈತರ ಕೃಷಿ ಸಾಲ ವಸೂಲಾತಿಗೆ ಜಮೀನನ್ನು ಹರಾಜು ಮಾಡುವುದನ್ನು ತಡೆಯಬೇಕು ಹಾಗೂ ಜಮೀನು ಉಳಿಸುವಂತೆ ಆಗ್ರಹಿಸಿ ನಗರದ ಕೆ.ಆರ್.ಪುರಂನಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಮುಂದೆ ರಸ್ತೆ ಮಧ್ಯೆ ಟೆಂಟ್ ಹಾಕಿ, ಸ್ಥಳದಲ್ಲಿಯೇ ಮಧ್ಯಾಹ್ನದ ಊಟ ತಯಾರಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸಾಮೂಹಿಕ ನಾಯಕತ್ವ ಜಿಲ್ಲಾ ಘಟಕದ ರಾಜ್ಯ ವರಿಷ್ಠ ಕೆ.ಟಿ. ಗಂಗಾಧರ್, ರೈತರು ಬೆಳೆ ಬೆಳೆಯಲು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದು ಸಾಲ ತೀರುವಳಿ ಮಾಡದೆ ಸುಸ್ತಿದಾರರಾಗಿರುವ ರೈತರ ಸಾಲವನ್ನು ಏಕಗಂಟು ಸಾಲ ತೀರುವಳಿ ಮೂಲಕ ತೀರುವಳಿ ಮಾಡಲಾಗುತ್ತಿದೆ.

ಆದರೆ ಕಾವೇರಿ ಗ್ರಾಮೀಣ ಬ್ಯಾಂಕ್‌ನವರು ಮಾಡುತ್ತಿಲ್ಲ. ಆದ್ದರಿಂದ ಕೂಡಲೇ ಏಕಗಂಟು ಮುಖಾಂತರ ತೀರುವಳಿ ಮಾಡಿಕೊಂಡು ರಿಯಾಯಿತಿ ಕೊಡಬೇಕು ಎಂದು ಆಗ್ರಹಿಸಿದರು.ಬ್ಯಾಂಕ್‌ನವರು ಲಾಯರ್ ಮತ್ತು ಕೋರ್ಟ್ ಮೂಲಕ ರೈತರಿಗೆ ನೋಟಿಸ್ ನೀಡುತ್ತಿದ್ದು, ಇ-ಹರಾಜು ಹಾಕುತ್ತೇವೆ ಎಂದು ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ.

ಇದು ಕೂಡಲೇ ರದ್ದಾಗಬೇಕು ಎಂದು ಒತ್ತಾಯಿಸಿದರು.ಸಾಲ ಪಡೆದ ರೈತರು, ಬೆಳೆ ನಷ್ಟ ಅಥವಾ ಆಕಸ್ಮಿಕವಾಗಿ ಮರಣ ಹೊಂದಿದರೆ ಸಾಲ ಮನ್ನ ಆಗಬೇಕು. ಬ್ಯಾಂಕ್‌ನವರು ವಿನಾಕಾರಣ ತೊಂದರೆ ನೀಡಬಾರದು, ಅಲೆಸಬಾರದು.

ಪ್ರತಿ ಮೂರು ತಿಂಗಳಿಗೊಮ್ಮೆ ಬಳ್ಳಾರಿ ಮುಖ್ಯ ಕಚೇರಿಯವರು ರೈತರನ್ನು ಅಲೆಸದೆ ಅವರೇ ಇಲ್ಲಿಗೆ ಬಂದು ರೈತರ ಅಹವಾಲು ಕೇಳಿ ತಕ್ಷಣ ಬಗೆಹರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಮುಖ್ಯ ಅಧಿಕಾರಿ ಬರುವುದನ್ನು ಬ್ಯಾಂಕ್‌ನ ಎಲ್ಲ ಶಾಖೆಯವರು ರೈತರಿಗೆ ಮಾಹಿತಿ ನೀಡಬೇಕು. ಸರ್ಕಾರದಿಂದ ಬರುವ ವೃದ್ಧಾಪ್ಯ ವೇತನ, ಹಾಲಿನ ಹಣ, ಪಿಎಂ ಸಮ್ಮಾನ್ ಕಿಸಾನ್ ಯೋಜನೆ ಕಂತನ್ನು ಬ್ಯಾಂಕ್‌ನವರು ಜಮಾ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ವರಿಷ್ಠ ಕಣಗಾಲ್ ಮೂರ್ತಿ, ರಾಜ್ಯ ಅಧ್ಯಕ್ಷೀಯ ಮಂಡಳಿಯ ಸದಸ್ಯ ಗ್ಯಾರಂಟಿ ರಾಮಣ್ಣ, ಮರ್ಕಲಿ ಪ್ರಕಾಶ್, ಮಂಜು ಬಿಟ್ಟಗೌಡನಹಳ್ಳಿ, ಅರಕಲಗೂಡು ತಾಲೂಕಿನ ಭುವನೇಶ್, ಬೇಲೂರು ತಾಲೂಕಿನ ಭೋಗ ಮಲ್ಲೇಶ್, ಕುಮಾರಸ್ವಾಮಿ ಇದ್ದರು.

error: Content is protected !!