ಹಾಸನ: ನಗರದ ಎನ್.ಆರ್. ವೃತ್ತದ ಬಳಿ ಇರುವ ಸಂತ ಅಂತೋಣಿಯವರ ದೇವಾಲಯದಲ್ಲಿ ಇಂದು ಮರಿಯ ಜಯಂತಿಯನ್ನು ಸಾಂಪ್ರದಾಯಿಕವಾಗಿ ಹಾಗೂ ವಿಜೃಂಭಣೆಯಾಗಿ ಆಚರಿಸಲಾಯಿತು.
ಧರ್ಮಕೇಂದ್ರದ ಗುರುಗಳು, ಸಹಗುರುಗಳು, ಆಹ್ವಾನಿತ ಗುರುಗಳು ಹಾಗೂ ಭಕ್ತಾದಿಗಳು ಈ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡು ತಮ್ಮ ಭಕ್ತಿಯನ್ನು ಮೆರೆದರು.

ಮರಿಯ ಜಯಂತಿಯನ್ನು ಕ್ರೈಸ್ತರು ಸುಗ್ಗಿ ಹಬ್ಬ, ಕುಟುಂಬಗಳ ಹಬ್ಬ, ಹೆಣ್ಣುಮಕ್ಕಳ ಹಬ್ಬ ಎಂಬ ಹಲವು ಹೆಸರುಗಳಿಂದ ಕರೆಯುತ್ತಾರೆ. ಈ ದಿನದಲ್ಲಿ ಬೆಳೆಯ ಪ್ರಥಮ ಫಲವನ್ನು ದೇವಾಲಯಕ್ಕೆ ತಂದು ಅರ್ಪಿಸುವ ಸಂಪ್ರದಾಯವಿದ್ದು, ಗುರುಗಳ ಆಶೀರ್ವಚನದ ನಂತರ ಧಾನ್ಯವನ್ನು ಕುಟುಂಬಗಳ ಸಹಭೋಜನಕ್ಕೆ ಬಳಸಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ವೃತ್ತಿಪರ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ಅಲ್ಲದೆ ವಿಶಿಷ್ಟ ಸಾಧಕರಿಗೂ ದಾನಿಗಳಿಗೂ ಸನ್ಮಾನ ನೆರವೇರಿಸಲಾಯಿತು.










