ಹಾಸನ: ನಗರದ ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ ಸೋಮವಾರ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲೆಯ ಖಜಾಂಚಿ ಸಪ್ನಕಿರಣ್ ಅವರು ಮಾತನಾಡಿ, “ಶಿಕ್ಷಕರು ಸಮಾಜದ ಮಾರ್ಗದರ್ಶಕರಾಗಿದ್ದು, ಅಜ್ಞಾನದಿಂದ ಜ್ಞಾನದೆಡೆಗೆ ವಿದ್ಯಾರ್ಥಿಗಳನ್ನು ನಡೆಸುವ ನಾವಿಕರು. ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ಬೋಧನೆ ಮಾಡಿ ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ ಧ್ಯೇಯ. ಆದ್ದರಿಂದ ಶಿಕ್ಷಕರ ಸೇವೆಯನ್ನು ಮರೆಯಬಾರದು” ಎಂದರು.
ಶಾಲೆಯಲ್ಲಿ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಹಿಂದಿ ಶಿಕ್ಷಕ ಪಾಂಡು ಎ. ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ತಿಮ್ಮಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಶಾಲಾ ವಿದ್ಯಾರ್ಥಿ ಲಿಖಿತ್ ಹೆಚ್.ಯು. ಮಾತನಾಡಿ, “ಡಾ. ರಾಧಾಕೃಷ್ಣನ್ ಬಡ ಕುಟುಂಬದಲ್ಲಿ ಜನಿಸಿ ಮೇರು ಶಿಕ್ಷಕರಾಗಿ, ತತ್ವಜ್ಞಾನಿಯಾಗಿ, ರಾಷ್ಟ್ರಪತಿಗಳಾಗಿ ದೇಶಕ್ಕೆ ಮಾದರಿಯಾದರು. ಅವರ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳೋಣ” ಎಂದರು.
ವಿದ್ಯಾರ್ಥಿನಿ ಮೋನಿಷಾ ಮಾತನಾಡಿ, “ಶಿಕ್ಷಕರು ಬದುಕಿಗೆ ದಾರಿ ತೋರಿಸುತ್ತಾರೆ. ಅವರಿಲ್ಲದೆ ವಿದ್ಯಾರ್ಥಿಗಳ ಜೀವನ ಶೂನ್ಯ. ಅವರು ನಮಗೆ ಶಿಸ್ತು, ಸ್ಪೂರ್ತಿ, ಉತ್ತಮ ನಡೆ-ನುಡಿ ಕಲಿಸುತ್ತಾರೆ” ಎಂದರು.
ಕಾರ್ಯಕ್ರಮವನ್ನು ಶಾಲಾ ಸಂಗೀತ ಶಿಕ್ಷಕಿ ಸುಕನ್ಯ ಅವರ ಪ್ರಾರ್ಥನಾ ಗೀತೆಯೊಂದಿಗೆ ಆರಂಭಿಸಲಾಯಿತು. ನಂತರ ಶಾಲೆಯ ಖಜಾಂಚಿ ಸಪ್ನ ಕಿರಣ್ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಆಡಳಿತಾಧಿಕಾರಿ ನಾಗರಾಜ್ ಅವರು ಎಲ್ಲಾ ಶಿಕ್ಷಕರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ಸಂಜನ ನಿರೂಪಿಸಿದರು. ಅನಘ ಸ್ವಾಗತಿಸಿದರು ಹಾಗೂ ಇಂಚರ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.










