ಹಾಸನ:12ನೇ ಶತಮಾನದ ವಿಶ್ವಗುರು ಬಸವಣ್ಣನವರಿಗೆ ರಾಜ್ಯ ಸರ್ಕಾರವು “ಸಾಂಸ್ಕೃತಿಕ ನಾಯಕ” ಎಂಬ ಘೋಷಣೆ ಮಾಡಿ ಒಂದು ವರ್ಷ ಪೂರೈಸಿದ ಸವಿನೆನಪಿಗಾಗಿ, ಸೆಪ್ಟೆಂಬರ್ 1ರಿಂದ ಪ್ರಾರಂಭವಾದ ಬಸವ ಸಂಸ್ಕೃತಿ ಅಭಿಯಾನ ಸೆಪ್ಟೆಂಬರ್ 21ರಂದು ಹಾಸನ ನಗರಕ್ಕೆ ಆಗಮಿಸಲಿದ್ದು, ಅದರ ಪೂರ್ವಭಾವಿ ಸಭೆ ಹಾಸನದ ತಣ್ಣೀರುಹಳ್ಳ ಶ್ರೀ ಮಠದ ಅವರಣದಲ್ಲಿ ಮಂಗಳವಾರ ನಡೆಯಿತು.
ಸಭೆಯಲ್ಲಿ ಮಾತನಾಡಿದ ಪುಷ್ಪಗಿರಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, “ಈ ಅಭಿಯಾನದಲ್ಲಿ ಜಾತಿ, ಧರ್ಮ, ವರ್ಗ ಭೇದವಿಲ್ಲದೆ ಪ್ರತಿಯೊಬ್ಬರೂ ಭಾಗವಹಿಸಬೇಕು.
ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ಪ್ರಚಾರ–ಪ್ರಸಾರಕ್ಕೆ ಹೆಚ್ಚು ಆದ್ಯತೆ ನೀಡಬೇಕು” ಎಂದು ಕರೆ ನೀಡಿದರು. ಅವರು, ಸೆಪ್ಟೆಂಬರ್ 21ರಂದು ಚಿಕ್ಕಮಗಳೂರಿನಿಂದ ಬೇಲೂರು ಮಾರ್ಗವಾಗಿ ಹಾಸನಕ್ಕೆ ಆಗಮಿಸುವ ಬಸವ ಸಂಸ್ಕೃತಿ ಅಭಿಯಾನಕ್ಕೆ ವೀರಶೈವ–ಲಿಂಗಾಯತ ಸಮಾಜ ಹಾಗೂ ಬಸವಭಕ್ತರು ಭವ್ಯ ಸ್ವಾಗತ ನೀಡುವಂತೆ ಸಲಹೆ ನೀಡಿದರು.
ಅಂದು ಬೆಳಿಗ್ಗೆ 11 ಗಂಟೆಗೆ ಕಲಾಭವನದಲ್ಲಿ ವಿದ್ಯಾರ್ಥಿಗಳು ಮುಖ್ಯವಾಗಿ ಭಾಗವಹಿಸುವ ಸಂವಾದ ಕಾರ್ಯಕ್ರಮ, ನಂತರ ಮಧ್ಯಾಹ್ನ 3 ಗಂಟೆಯಿಂದ ಬಸವ ಪುತ್ಥಳಿಯ ಸ್ತಬ್ಧಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಬಳಿಕ ಕಲಾಭವನದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ.
ತಣ್ಣೀರುಹಳ್ಳ ಶ್ರೀ ಮಠದ ಪೂಜ್ಯ ಶ್ರೀ ಶ್ರೀ ವಿಜಯಕುಮಾರ ಸ್ವಾಮೀಜಿ ಅವರು, “ಈ ಹಿಂದೆ ಧಾರವಾಡದಲ್ಲಿ ನಡೆದ ಬಸವ ಮಠಾಧೀಶರ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಭಿಯಾನವನ್ನು ನಡೆಸಲು ತೀರ್ಮಾನಿಸಲಾಯಿತು. ಹಾಸನದಲ್ಲಿ ಕಾರ್ಯಕ್ರಮ ನಡೆಸಲು ನಮಗೆ ಸೂಚನೆ ನೀಡಿದ ಬಳಿಕ ಎಲ್ಲಾ ಮಠಾಧೀಶರಿಗೆ ಮಾಹಿತಿ ನೀಡಿದ್ದು, ಇಂದು ಪೂರ್ವಭಾವಿ ಸಭೆಗೆ ಹೆಚ್ಚಿನ ಪ್ರತಿಕ್ರಿಯೆ ದೊರೆತಿದೆ. ಶ್ರೀಮಠದಿಂದ ಪೂರ್ಣ ಸಹಕಾರ ಲಭ್ಯವಾಗಲಿದೆ” ಎಂದು ತಿಳಿಸಿದರು.
ಅರಕಲಗೂಡು ತಾಲ್ಲೂಕಿನ ದೊಡ್ಡಮಠದ ಪೂಜ್ಯ ಶ್ರೀ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, “ಬಸವ ಸಂಸ್ಕೃತಿ ಅಭಿಯಾನವು ಸಮಸಮಾಜ ನಿರ್ಮಾಣ, ವ್ಯಸನಮುಕ್ತ ಸಮಾಜದ ನಿರ್ಮಾಣ, ಸದೃಢ ಸಮಾಜ ಕಟ್ಟುವುದು, ಮಕ್ಕಳಲ್ಲಿ ಅಧ್ಯಾತ್ಮಿಕ ಭಾವನೆ ಮೂಡಿಸುವುದು, ಮಹಿಳೆಯರ ಘನತೆ ಹೆಚ್ಚಿಸುವಂಥ ಗುರಿಗಳನ್ನು ಹೊಂದಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಕರೆ ನೀಡಿದರು.
ಸಭೆಯಲ್ಲಿ ಹಾಸನ–ಕೊಡಗು ಜಿಲ್ಲೆಯ ಅನೇಕ ಮಠಾಧೀಶರು, ಹಾಸನ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನವಿಲೆ ಪರಮೇಶ್, ಶರಣ ಸಾಹಿತ್ಯ ಪರಿಷತ್ತಿನ ಮುಖಂಡರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.










