ಬಾಲೇಸೊರ್ (ಒಡಿಸ್ಸಾ): ತಮ್ಮ ಕ್ರಿಯಾಶೀಲ ರಾಜಕೀಯದಿಂದ ಎಐಸಿಸಿ ವರಿಷ್ಠರ ಗಮನ ಸೆಳೆದಿರುವ, ಚಿಕ್ಕ ವಯಸ್ಸಿನಲ್ಲೇ ಒಡಿಸ್ಸಾ ರಾಜ್ಯಕ್ಕೆ ಎಐಸಿಸಿ ವೀಕ್ಷಕರಾಗಿ ನಿಯೋಜನೆಗೊಂಡಿರುವ ಹಾಸನ ಸಂಸದ ಶ್ರೇಯಸ್ ಪಟೇಲ್ ಅವರು ಸೋಮವಾರ ಅಲ್ಲಿ ತಮ್ಮ ಚೊಚ್ಚಲ ಸಭೆ ಮೂಲಕ ಕಾರ್ಯಾರಂಭ ಮಾಡಿದ್ದಾರೆ. ಪಕ್ಷ ಸಂಘಟನೆ ಸಂಬಂಧ ಅಲ್ಲಿನ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸುವ ಮೂಲಕ ಯುವ ಸಂಸದ ಮಹತ್ವದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ.

ಬಾಲೇಸೊರ್ ಜಿಲ್ಲೆಯಲ್ಲಿ ನಡೆಯುತ್ತಿರುವ ಸಂಘಟನ್ ಸೃಜನ್ ಅಭಿಯಾನದ ಅಂಗವಾಗಿ ಅವರು ಇಂದು ಬಾಲೇಸೊರ್‌ನ ಬ್ರಿಟ್ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಂಘಟನಾ ಸಭೆಯಲ್ಲಿ ಪಾಲ್ಗೊಂಡು, ನೆರೆದಿದ್ದ ಸಾವಿರಾರು ಮಂದಿ ಮುಖಂಡರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
“ಪಕ್ಷ ಸಂಘಟನೆ ತಳಮಟ್ಟದಲ್ಲಿ ಬಲಿಷ್ಠವಾಗಬೇಕು. ಪ್ರತಿಯೊಬ್ಬರೂ ಶ್ರಮವಹಿಸಿ, ಗ್ರಾಮ ಪಂಚಾಯ್ತಿ ಮಟ್ಟದಿಂದ ಬೂತ್ ಮಟ್ಟದವರೆಗೆ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರೆ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಮತ್ತಷ್ಟು ಶಕ್ತಿ ಪಡೆದು ಮುಂದಿನ ದಿನಗಳಲ್ಲಿ ಕೇಂದ್ರದಲ್ಲೂ ಅಧಿಕಾರ ಹಿಡಿಯಲು ಸಹಕಾರಿ ಆಗುತ್ತದೆ” ಎಂದು ಅವರು ಹೇಳಿದರು.
ಯುವ ಕಾಂಗ್ರೆಸ್ ಸಂಘಟನೆ ಹಾಗೂ ಬೂತ್ ಮಟ್ಟದ ಚಟುವಟಿಕೆಗಳ ಕುರಿತು ಹಿರಿಯ, ಕಿರಿಯ ಹಾಗೂ ಮಹಿಳಾ ಮುಖಂಡರೊಂದಿಗೆ ಚರ್ಚಿಸಿದ ಶ್ರೇಯಸ್ ಪಟೇಲ್, “ನಮ್ಮ ನಾಯಕರ ಕೈ ಬಲಪಡಿಸುವ ಮೂಲಕ ಪ್ರತಿಯೊಬ್ಬರೂ ತಮಗೆ ಬೇಕಾದ ಅಧಿಕಾರ ಹಾಗೂ ಅವಕಾಶಗಳನ್ನು ಪಡೆಯಬಹುದು. ಇದರಿಂದ ಸಮಾಜದ ಎಲ್ಲಾ ವರ್ಗಗಳಿಗೆ ಅನುಕೂಲ ಸಿಗುತ್ತದೆ” ಎಂದು ಸಲಹೆ ನೀಡಿದರು.










