4.2 C
Munich
Home News ಸಾಂಸ್ಕೃತಿಕ ಕಲೆಗಳ ತವರೂರು ಬೇಲೂರಿನಲ್ಲಿ ನಾವಿರುವುದು ಪುಣ್ಯ: ತಹಶೀಲ್ದಾರ್ ಶ್ರೀಧರ್

ಸಾಂಸ್ಕೃತಿಕ ಕಲೆಗಳ ತವರೂರು ಬೇಲೂರಿನಲ್ಲಿ ನಾವಿರುವುದು ಪುಣ್ಯ: ತಹಶೀಲ್ದಾರ್ ಶ್ರೀಧರ್

ಬೇಲೂರು: ಕಲೆ ಸಾಹಿತ್ಯ ಸಂಸ್ಕೃತಿಗೆ ಹೆಸರಾಗಿರುವುದಲ್ಲದೆ, ಕನ್ನಡಕ್ಕೆ ಪ್ರಥಮ ಶಿಲಾ ಶಾಶನ ನೀಡಿದ ಹೆಗ್ಗಳಿಕೆ ಪಾತ್ರವಾಗಿರುವ ಬೇಲೂರು ತಾಲೂಕಿನಲ್ಲಿ ನಾವುಗಳಿರುವುದು ಸಂತೋಷ ತಂದಿದೆ ಎಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಹೇಳಿದರು.

೭೯ನೇ ಸ್ವಾತಂತ್ರ್ಯ ದಿನದ ಅಂಗವಾಗಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಪುರಸಭೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶುಕ್ರವಾರ ಸಂಜೆ ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾಗಿದೆ. ಬೇಲೂರಿನಲ್ಲಿ ಕಲೆ, ಸಾಹಿತ್ಯ, ಸಂಗೀತ ಇನ್ನಿತರೆ ಕಲಾ ವೈಭವವನ್ನು ಹೆಚ್ಚಾಗಿ ಕಾಣಬಹುದು. ಬಹುತೇಕ ಕಲಾವಿದರು ಎಲೆಮರೆ ಕಾಯಿಯಂತಿದ್ದಾರೆ. ಅಂತಹ ಕಲಾವಿದರನ್ನು ಗುರುತಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಕಸಾಪ ಗೌರವಾಧ್ಯಕ್ಷ ರಾಜೇಗೌಡ ಮಾತನಾಡಿ, ಪರಿಷತ್ ಪ್ರತಿವರ್ಷ ಸ್ವಾತಂತ್ರ‍್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವದಂದು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗೆ ಪೂರಕವಾಗಿ ಕಾರ್ಯಕ್ರಮ ಮಾಡಲಾಗುತ್ತಿದೆ. ಅಲ್ಲದೆ ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಮಾ.ನ.ಮಂಜೇಗೌಡ ಮಾತನಾಡಿ, ಪ್ರತಿವರ್ಷ ಈ ಕಾರ್ಯಕ್ರಮ ಕೋಟೆ ಬಯಲು ರಂಗ ಮಂದಿರದಲ್ಲಿ ನಡೆಯುತಿತ್ತು. ಆದರೆ ಅದು ಈಗ ಶಿಥಿಲಾವಸ್ತೆ ತಲುಪಿರುವುದರಿಂದ ಅಲ್ಲಿ ಸಾಧ್ಯವಾಗಿಲ್ಲ. ಆದ್ದರಿಂದ ತಹಸೀಲ್ದಾರ್‌ರವರು ಈ ಬಗ್ಗೆ ಗಮನ ಹರಿಸಿ ಬಯಲು ರಂಗ ಮಂದಿರವನ್ನು ಶೀಘ್ರವಾಗಿ ದುರಸ್ತಿ ಮಾಡಿಸಿ ಕೊಡಬೇಕು ಎಂದರು.

ಇದೇ ಸಂದರ್ಭ ನಿವೃತ್ತ ಸೈನಿಕ ಧರ್ಮರಾಜು, ಪುರಸಭೆ ಆರೋಗ್ಯಾಧಿಕಾರಿ ಲೋಹಿತ್‌ರನ್ನು ಅಭಿನಂದಿಸಲಾಯಿತು. ತಾಪಂ ಸಹಾಯಕ ನಿರ್ದೇಶಕ ದಯಾನಂದ್, ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್, ಆರ್ ಎಸ್ ಮಹೇಶ್, ಸಂ.ಕಾರ್ಯದರ್ಶಿ ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಮಾ.ಶಿವಮೂರ್ತಿ, ಪದಾಧಿಕಾರಿಗಳಾದ ಕೇಬಲ್ ವಿಜಯಕುಮಾರ್, ಧರ್ಮ ಪ್ರಕೃತಿ, ನಿರಂಜನ್, ಸುಲೈಮಾನ್ ಸೇರಿದಂತೆ ವಿವಿಧ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇತರರಿದ್ದರು.

error: Content is protected !!