12.7 C
Munich
Home News ಅರಸೀಕೆರೆಯಲ್ಲಿ ಅದ್ಧೂರಿಯಾಗಿ ನೆರವೇರಿದ ಕೃಷ್ಣ ಜನ್ಮಾಷ್ಟಮಿ

ಅರಸೀಕೆರೆಯಲ್ಲಿ ಅದ್ಧೂರಿಯಾಗಿ ನೆರವೇರಿದ ಕೃಷ್ಣ ಜನ್ಮಾಷ್ಟಮಿ

ಅರಸೀಕೆರೆ: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಗುತ್ತಿನಕೆರೆ ಗ್ರಾಮದಲ್ಲಿ ನೆಲೆಸಿರುವ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದರು. ನೂರಾರು ಭಕ್ತರು ಶ್ರದ್ಧಾಭಕ್ತಿಯೊಂದಿಗೆ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು.
 ಕೃಷ್ಣ ಜನ್ಮಾಷ್ಠಮಿ ಜೊತೆಗೆ ಶ್ರಾವಣಮಾಸದ ಮೂರನೇ ಶನಿವಾರ ಆಗಿರುವುದರಿಂದ ಸಹಜವಾಗಿಯೇ ಭಕ್ತರ ದಂಡು ಮುಂಜಾನೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿತ್ತು. ಬೆಳಗ್ಗೆ ರಂಗನಾಥಸ್ವಾಮಿಯ ಏಕಶಿಲಾ ವಿಗ್ರಹಕ್ಕೆ ನಾನಾ ಬಗೆಯ ಅಭಿಷೇಕ, ವಿವಿಧ ಅರ್ಚನೆಗಳು, ದೇವಾಲಯದ ಸಂಪ್ರದಾಯದಂತೆ ನಡೆದವು.
 ಅಲಂಕಾರ ಪ್ರಿಯನಾದ ರಂಗನಾಥಸ್ವಾಮಿಗೆ ಇಂದು ಮಾಡಲಾಗಿದ್ದು ಕೃಷ್ಣಾಲಂಕಾರವನ್ನು ಭಕ್ತರು ಕಣ್ತುಂಬಿಕೊಂಡರು. ಮಹಾಮಂಗಳಾರತಿ ವೇಳೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಂತರ ಹೂ ನೀಲಾ ಸಮೇತನಾದ ರಂಗನಾಥಸ್ವಾಮಿ, ತಿಮ್ಮಪ್ಪಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಹರಕೆ ಹೊತ್ತಿದ್ದ ಭಕ್ತರು ದೇವಾಲಯದ ಆವರಣದಲ್ಲಿ ಪ್ರಸಾದ ವಿನಿಯೋಗ ಹಮ್ಮಿಕೊಂಡಿದ್ದರು.
 ನಾನಾ ಕಡೆ ಪೂಜೆ: ಇದೇ ರೀತಿ ತಾಲೂಕಿನ ಮಾಲೇಕಲ್ ಅಮರಗಿರಿ ತಿರುಪತಿ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯ ಸೇರಿದಂತೆ ಬಿಳಿಕಲ್ ರಂಗನಾಥ ಸ್ವಾಮಿ ದೇವಾಲಯ, ಬೆಟ್ಟದಪುರದ ರಂಗನಾಥ ಸ್ವಾಮಿ ದೇವಾಲಯ, ಜಾವಗಲ್ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ, ಹಾರನಹಳ್ಳಿ ಚನ್ನಕೇಶವ ದೇವಾಲಯ ಹಾಗೂ ನಗರದ ರುಕ್ಮಿಣಿ ಪಾಂಡುರಂಗ ದೇವಾಲಯ ಮತ್ತು ಪ್ರಾಚೀನ ಆಂಜನೇಯ ದೇವಾಲಯಗಳಲ್ಲಿ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ವಿಶೇಷ ಪೂಜೆಗಳು ನಡೆದವು.
error: Content is protected !!