10.4 C
Munich
Home News ಚನ್ನರಾಯಪಟ್ಟಣ:ವೀರ ಮಹನೀಯರ ತ್ಯಾಗ ಬಲಿದಾನದ ಸಂಕೇತವೇ ಸ್ವಾತಂತ್ರ್ಯ ದಿನ

ಚನ್ನರಾಯಪಟ್ಟಣ:ವೀರ ಮಹನೀಯರ ತ್ಯಾಗ ಬಲಿದಾನದ ಸಂಕೇತವೇ ಸ್ವಾತಂತ್ರ್ಯ ದಿನ

ಚನ್ನರಾಯಪಟ್ಟಣ: ಅದೆಷ್ಟೋ ವೀರ ಮಹನೀಯರ ತ್ಯಾಗ ಬಲಿದಾನದ ಸಂಕೇತವೇಸ್ವಾತಂತ್ರ್ಯ  ದಿನ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ಆರ್.ತಾತೇಗೌಡ ಹೇಳಿದರು.

ತಾಲ್ಲೂಕಿನ ದಿಡಗ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ೭೯ ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಅವರ ಹೋರಾಟದ ಫಲವಾಗಿ ನಾವು ಇಂದು ಸ್ವಾತಂತ್ರ್ಯರಾಗಿ ಬದುಕುತಿದ್ದೇವೆ ಎಂದು ಸ್ಮರಿಸಿದರು.

ದಂಡೆತ್ತಿ ಬಂದ ಅನೇಕ ರಾಜರು ಅಖಂಡ ಭಾರತ ದೇಶವನ್ನು ಆಕ್ರಮಣಗೊಳಿಸಿ ಆಳ್ವಿಕೆ ನಡೆಸಿದ್ದು ನಮ್ಮ ಪೂರ್ವಿಕರನ್ನು ಗುಲಾಮರಂತೆ ಕಂಡಿದ್ದರು. ಇನ್ನು ಬ್ರಿಟೀಷರು ಸರಿಸುಮಾರು ೩೦೦ ಕ್ಕೂ ಹೆಚ್ಚು ವರ್ಷಗಳ ಕಾಲ ನಮ್ಮನ್ನು ಆಳಿದ್ದಾರೆ ಎಂದರು.

ಆದರೆ, ಮಹಾತ್ಮ ಗಾಂಧೀಜಿ, ನೆಹರು, ಸುಭಾಶ್ ಚಂದ್ರ ಭೋಸ್, ಸರ್ದಾರ್ ವಲ್ಲಭಾಯ್ ಪಟೇಲ್, ವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಅನೇಕ ಮಂದಿ ಮಹನೀಯರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವ ಹಾಗೂ ಜೀವನವನ್ನು ತ್ಯಾಗ ಮಾಡಿದ್ದಾರೆ. ಅಂದು ಅವರು ಹೋರಾಡಿ ಸ್ವಾತಂತ್ರ್ಯ ಕೊಡಿಸಿದ್ದರಿಂದ ಇಂದು ನಾವು ನೆಮ್ಮದಿ ಹಾಗೂ ಸುಂದರ ಬದುಕು ಕಟ್ಟಿಕೊಂಡು ಬದುಕುತಿದ್ದೇವೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಎಂಬುದು ಕೇವಲ ಒಂದು ದಿನ ಸಿಹಿ ಹಂಚಿ ಸಂಭ್ರಮಿಸುವ ಹಬ್ಬವಲ್ಲ. ಪ್ರತಿದಿನ ಪ್ರತಿಕ್ಷಣ ಮನಸ್ಸಿನಲ್ಲಿ ಆರಾಧಿಸುವ ಉಸಿರಾಗಬೇಕು. ತಮ್ಮ ಬದುಕನ್ನು ಬಲಿಕೊಟ್ಟು ಮಹನೀಯರು ತಂದುಕೊಟ್ಟಿರುವ  ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಕರೆ ನೀಡಿದರು.

ನಂತರ ೨೦೨೪-೨೫ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ ೧೫ ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಅಭಿನಂಧಿಸಲಾಯಿತು. ದಿಡಗ ಗ್ರಾಮದ ಡಾ.ರಾಜ್ ವೃತ್ತದಲ್ಲಿ ಮೆರವಣಿಗೆಯಲ್ಲಿ ಸಾಗಿದ ಸರ್ಕಾರಿ ಹಿರಿಯ, ಕಿರಿಯ ಹಾಗೂ ಫ್ರೌಢಶಾಲೆ, ಕಾಲೇಜು ಮತ್ತು ಅರುಣೋದಯ, ಹೊಯ್ಸಳ ವಿದ್ಯಾಸಂಸ್ಥೆಯ ವಿರ್ದ್ಯಾರ್ಥಿಗಳಿಗೆ ಶುಭಾಶಯ ಕೋರಿ ಸಿಹಿ ಹಂಚಲಾಯಿತು.

ಸಂಘದ ಉಪಾಧ್ಯಕ್ಷ ಕುಮಾರ್, ಮಾಜಿ ಅಧ್ಯಕ್ಷರಾದ ಹೆಚ್.ಕೆ.ಯೋಗೇಶ್, ನಿಂಗೇಗೌಡ, ನಿರ್ದೇಶಕರಾದ ಮಲ್ಲೇಶ್‌ಗೌಡ, ಹೆಚ್.ಎಸ್.ಮಹೇಶ್, ಮಧುಗೌಡ, ಬಾಲು, ವೆಂಕಟೇಶ್, ಜಯಮ್ಮ, ವನಜಾಕ್ಷಮ್ಮ, ತುಳಸಿ, ಕಾರ್ಯನಿರ್ವಹಣಾಧಿಕಾರಿ ನಿಂಗಮ್ಮ, ಸಿಬ್ಬಂದಿ ವರ್ಗ ಹಾಗೂ ಇನ್ನಿತರರು ಇದ್ದರು.

error: Content is protected !!