Hassan:ಬಿಳಿಸುಳಿ ರೋಗಮುಕ್ತ ಬಿತ್ತನೆ ಬೀಜ ಮಾರಾಟಕ್ಕೆ ಸೂಚನೆ-ರಸಗೊಬ್ಬರ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ: ಸಂಸದ ಶ್ರೇಯಸ್ ಎಂ. ಪಟೇಲ್ ಎಚ್ಚರಿಕೆ

Hassan|ಹಾಸನ: ಜಿಲ್ಲೆಯ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳು ಸಕಾಲದಲ್ಲಿ ಲಭ್ಯವಾಗುವಂತೆ ಅಧಿಕಾರಿಗಳು ಹಾಗೂ ಸರಬರಾಜುದಾರರು ಅಗತ್ಯ ಕ್ರಮ ಕೈಗೊಳ್ಳಬೇಕು. ಕಳಪೆ ಗುಣಮಟ್ಟದ ಬಿತ್ತನೆ ಬೀಜ ಮಾರಾಟ ಮತ್ತು ರಸಗೊಬ್ಬರಗಳ ಕಾಳಸಂತೆ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ನಡೆದ ಮುಂಗಾರು ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಲಭ್ಯತೆ ಮತ್ತು ವಿತರಣೆಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಸಾಲಿನಲ್ಲಿ ಮುಸುಕಿನ ಜೋಳದಲ್ಲಿ ಬಿಳಿಸುಳಿ ರೋಗ ಹಾಗೂ ಆಲೂಗಡ್ಡೆ ಬೆಳೆಯಲ್ಲಿ ರೋಗ ಕಾಣಿಸಿಕೊಂಡು ರೈತರು ತೀವ್ರ ನಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಡ್ಯ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪರೀಕ್ಷೆಗೊಳಗಾಗಿ ‘ಬಿಳಿಸುಳಿ ರೋಗಮುಕ್ತ’ ಎಂದು ಪ್ರಮಾಣೀಕರಿಸಲ್ಪಟ್ಟ ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಖಾಸಗಿ ಡೀಲರ್‌ಗಳು ಹಾಗೂ ರೈತ ಸಂಪರ್ಕ ಕೇಂದ್ರಗಳಿಗೆ ಸೂಚನೆ ನೀಡಿದರು.

ಬೀಜ ಖರೀದಿಸುವ ರೈತರಿಗೆ ಕಡ್ಡಾಯವಾಗಿ ಬಿತ್ತನೆ ಬೀಜದ ಹೆಸರು ಹಾಗೂ ಲಾಟ್ ನಂಬರ್ ನಮೂದಿಸಿರುವ ಬಿಲ್ ನೀಡಬೇಕು. ಜೊತೆಗೆ ಬಿಳಿಸುಳಿ ರೋಗ ನಿಯಂತ್ರಣಕ್ಕೆ ಅಗತ್ಯವಿರುವ ರಾಸಾಯನಿಕಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಸಮರ್ಪಕ ಪ್ರಮಾಣದಲ್ಲಿ ದಾಸ್ತಾನು ಇಟ್ಟುಕೊಳ್ಳುವಂತೆ ನಿರ್ದೇಶಿಸಿದರು.

ಸಭೆಯಲ್ಲಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕರು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 1,64,187 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದ್ದು, ಪ್ರಸ್ತುತ 54,809 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿರುವುದರಿಂದ ಯಾವುದೇ ಕೊರತೆಯಿಲ್ಲ ಎಂದು ಮಾಹಿತಿ ನೀಡಿದರು.

ಕೃಷಿ ಪರಿಕರಗಳನ್ನು ನಿಗದಿತ ಮುಖಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರು ಎಚ್ಚರಿಸಿದರು. ಯೂರಿಯಾ ಖರೀದಿಗೆ ಎಫ್.ಐ.ಡಿ (FID) ಕಡ್ಡಾಯಗೊಳಿಸಲಾಗಿದ್ದು, ಕಾಳಸಂತೆ ಮಾರಾಟಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಎಲ್ಲಾ ಖಾಸಗಿ ಡೀಲರ್‌ಗಳು ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಕಡ್ಡಾಯವಾಗಿ ದಾಸ್ತಾನು ಫಲಕ ಮತ್ತು ದರಪಟ್ಟಿಯನ್ನು ಪ್ರದರ್ಶಿಸಬೇಕು ಎಂದು ಸೂಚಿಸಿದರು.

ಈ ವರ್ಷ ಜಿಲ್ಲೆಯಲ್ಲಿ ಮುಂಗಾರು ಮಳೆಯು ಶೇ.19ರಷ್ಟು ಕೊರತೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ, ಈ ಬಾರಿ ಕೇವಲ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಹೀಗಾಗಿ ಮಳೆ ಕೊರತೆಯ ಪರಿಸ್ಥಿತಿಯಲ್ಲಿ ಬೆಳೆಯಬಹುದಾದ ಪರ್ಯಾಯ ಬೆಳೆಗಳ ಕುರಿತು ರೈತರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಬೆಳೆ ವಿಮೆ ಅಧಿಸೂಚನೆ ಪ್ರಕಟವಾದ ಕೂಡಲೇ ಪತ್ರಿಕಾ ಪ್ರಕಟಣೆ ನೀಡಿ ಹೆಚ್ಚಿನ ರೈತರು ವಿಮೆ ಯೋಜನೆಯ ಸೌಲಭ್ಯ ಪಡೆಯುವಂತೆ ಕ್ರಮವಹಿಸಬೇಕು. ರೈತ ಸಂಪರ್ಕ ಕೇಂದ್ರಗಳಿಗೆ ಬರುವ ರೈತರೊಂದಿಗೆ ಅಧಿಕಾರಿಗಳು ತಾಳ್ಮೆಯಿಂದ ವರ್ತಿಸಿ, ಅವರಿಗೆ ಅಗತ್ಯ ತಾಂತ್ರಿಕ ಮಾಹಿತಿ ಮತ್ತು ಕೃಷಿ ಪರಿಕರಗಳನ್ನು ಒದಗಿಸಬೇಕು ಎಂದು ಸೂಚಿಸಿದರು.

ಯೂರಿಯಾ ಬಳಕೆಯ ಬದಲಾಗಿ ನ್ಯಾನೋ ಯೂರಿಯಾ ಬಳಕೆಗೆ ಉತ್ತೇಜನ ನೀಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ ಅವರು, ಆಗಸ್ಟ್ ಅಂತ್ಯದವರೆಗೂ ಕೃಷಿ ಚಟುವಟಿಕೆಗಳು ತೀವ್ರಗೊಳ್ಳುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೆಚ್ಚಿನ ದಕ್ಷತೆಯಿಂದ ಕಾರ್ಯನಿರ್ವಹಿಸಿ ರೈತರಿಗೆ ಸಕಾಲದಲ್ಲಿ ಸೇವೆ ಒದಗಿಸಬೇಕು ಎಂದು ತಿಳಿಸಿದರು.

ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಅಹಿತಕರ ಘಟನೆಗಳು ನಡೆದರೆ ಜಿಲ್ಲಾಡಳಿತವು ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ ಎಂದು ಸಭೆಯಲ್ಲಿ ಎಚ್ಚರಿಕೆ ನೀಡಲಾಯಿತು.