Instagram Reelsನಲ್ಲಿ ಸದ್ದು ಮಾಡುತ್ತಿರುವ ಯಶವಂತ್ ನಟನೆಯ ಚೊಚ್ಚಲ ಸಿನಿಮಾ ‘ಸರ್ಕಾರಿ ಶಾಲೆ H8’ ಇದೇ ಫೆಬ್ರವರಿ 6ರಂದು ತೆರೆಕಾಣುತ್ತಿದೆ. ಗುಣ ನಟಿಸಿ, ನಿರ್ದೇಶಿಸಿರುವ ಚಿತ್ರವಿದು. ಅವರಿಲ್ಲಿ ನಾಯಕನಟನ ಚೈಲ್ಡ್‌ಹುಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದುರ್ಗದ ಯಶವಂತ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಪ್ರತಿಭೆ. Instagram reelಗಳಲ್ಲಿ ತಾವೇ ಕಾನ್ಸೆಪ್ಟ್ ಮಾಡಿಕೊಂಡು ಜನರನ್ನು ರಂಜಿಸುತ್ತಾ ಬಂದಿದ್ದಾರೆ. ‘ಸರ್ಕಾರಿ ಶಾಲೆ H8’ ಚಿತ್ರದ ಮೂಲಕ ಅವರು ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದು, ಈ ಸಿನಿಮಾ ಇದೇ ಫೆಬ್ರವರಿ 6ರಂದು ತೆರೆಕಾಣುತ್ತಿದೆ. ಗುಣ ಹರಿಯಬ್ಬೆ ಅವರು ಕತೆ, ಚಿತ್ರಕಥೆ ರಚಿಸಿ ನಟಿಸಿ – ನಿರ್ದೇಶಿಸಿರುವ ಚಿತ್ರದಲ್ಲಿ ಯಶವಂತ್ ನಾಯಕನಟನ ಚೈಲ್ಡ್‌ಹುಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚೊಚ್ಚಲ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿರುವುದು ಯಶವಂತ್ ಸಂಭ್ರಮ ಹೆಚ್ಚಿಸಿದೆ.
ಮೊದಲ ಸಿನಿಮಾ ಅನುಭವ ಹಂಚಿಕೊಳ್ಳುವ ಯಶವಂತ್, ‘ನನ್ನ ರೀಲ್ಸ್ ನೋಡಿ ನಿರ್ದೇಶಕ ಗುಣ ಅವರು ಚಿತ್ರದಲ್ಲಿ ಅವಕಾಶ ಕಲ್ಪಿಸಿದರು. ನಿಜಕ್ಕೂ ನನಗೆ ಇದೊಂದು ದೊಡ್ಡ ಅವಕಾಶ. ಮನೆಯಲ್ಲಿ ಅಪ್ಪ, ಅಮ್ಮ, ತಮ್ಮನ ಎದುರು ರೀಲ್ಸ್ ಮಾಡುತ್ತಿದ್ದೆ. ಸಿನಿಮಾ ಶೂಟಿಂಗ್‌ನಲ್ಲಿ ನೂರಾರು ಜನರೆದುರು ನಟಿಸುವ ಸವಾಲು ಎದುರಾಗಿತ್ತು. ನಿರ್ದೇಶಕರು ಹಾಗೂ ಸೆಟ್‌ನಲ್ಲಿದ್ದ ಕಲಾವಿದರ ಸಲಹೆ – ಸೂಚನೆಗಳಿಂದಾಗಿ ಧೈರ್ಯದಿಂದ ಕ್ಯಾಮೆರಾ ಎದುರಿಸಿದೆ. ಹರಿಯಬ್ಬೆ, ಚಿತ್ರದುರ್ಗ ಮತ್ತು ಬೆಂಗಳೂರಿನಲ್ಲಿ ನಡೆದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದೇನೆ. ಸುಚೇಂದ್ರಪ್ರಸಾದ್ ಅವರಂತಹ ಹಿರಿಯ ಕಲಾವಿದರೊಂದಿಗೆ ನಟಿಸುವ ಅಪೂರ್ವ ಅವಕಾಶ ನನ್ನದಾಯ್ತು’ ಎನ್ನುತ್ತಾರೆ.

ಶಾಲೆಯಲ್ಲಿ ಓದುತ್ತಿದ್ದಾಗಲೇ ಯಶವಂತ್‌ಗೆ ನಟನೆ ಬಗ್ಗೆ ಆಸಕ್ತಿ ಚಿಗುರಿತ್ತು. ಶಾಲೆಯ ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂದು. 8ನೇ ತರಗತಿ ಓದುತ್ತಿರುವಾಗ Instagram ಪರಿಚಯವಾಯ್ತು. ಸಿನಿಮಾ ಹಾಡುಗಳಿಗೆ ರೀಲ್ಸ್ ಮಾಡುವುದಲ್ಲದೆ ಸ್ವತಃ ತಾವೂ ಕಾನ್ಸೆಪ್ಟ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಮಿಂಚಿದರು. ಯಶವಂತ್ ಸದ್ಯ ಚಿತ್ರದುರ್ಗದ ರಾಘವೇಂದ್ರ ಕಾಲೇಜ್‌ನಲ್ಲಿ ಪ್ಯಾರಾ ಮೆಡಿಕಲ್ ಡಿಪ್ಲೊಮೊ ಮೊದಲ ವರ್ಷ ಓದುತ್ತಿದ್ದಾರೆ. ಡ್ಯಾನ್ಸ್‌ನಲ್ಲೂ ಅವರಿಗೆ ಪರಿಣತಿ ಇದೆ. ಮುಂದಿನ ದಿನಗಳಲ್ಲಿ ನಟನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವ ಇರಾದೆ ಅವರದ್ದು.
ಯಶವಂತ್‌ರ ತಂದೆ ಬಸವರಾಜ್ ಚಿತ್ರದುರ್ಗ ಹೊಳಲ್ಕೆರೆ ರಸ್ತೆಯ ಕರಿಬಸವೇಶ್ವರ ಬೆಣ್ಣೆದೋಸೆ ಹೋಟೆಲ್ ನಡೆಸುತ್ತಿದ್ದಾರೆ. ತಂದೆ ಬಸವರಾಜ್, ತಾಯಿ ಶೀಲಾ ಅವರಿಗೆ ಪುತ್ರನ ಪ್ರತಿಭೆ ಬಗ್ಗೆ ಅಪಾರ ಹೆಮ್ಮೆಯಿದೆ. ಯಶವಂತ್‌ರ ತಮ್ಮ ಕರಣ್ 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ಕರಣ್, Instagram Reels ಮೇಕಿಂಗ್‌ನಲ್ಲಿ ಅಣ್ಣನಿಗೆ ನೆರವಾಗುತ್ತಾರೆ. Insta ಜೊತೆ ಯಶವಂತ್ ಯೂಟ್ಯೂಬ್ ಕೂಡ ಮಾಡಿದ್ದಾರೆ. ಅವರ Vlogs ಗೆ ಸಾಕಷ್ಟು ಫಾಲೋಯರ್ಸ್ ಇದ್ದಾರೆ. ನಟ ಕಿಚ್ಚ ಸುದೀಪ್, ಯಶವಂತ್‌ರ ಫೇವರೆಟ್ ನಟ. ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸದ ಜೊತೆಜೊತೆಗೇ ನಟನೆಯಲ್ಲಿಯೂ ಮುಂದುವರೆಯುವುದು ಯಶವಂತ್‌ರ ಅಭಿಲಾಷೆ. ಕುಟುಂಬದವರು ಯಶವಂತ್‌ಗೆ ಒತ್ತಾಸೆಯಾಗಿ ನಿಂತಿದ್ದಾರೆ.











