14.2 C
Munich
Home News ಸಕಲೇಶಪುರ: ಎಸ್.ಎಲ್. ಭೈರಪ್ಪಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಸಕಲೇಶಪುರ: ಎಸ್.ಎಲ್. ಭೈರಪ್ಪಗೆ ಶ್ರದ್ಧಾಂಜಲಿ ಕಾರ್ಯಕ್ರಮ

Writer Leela said that the passing away of S.L. Bhyrappa, a prominent writer in the Kannada literary world, is an irreparable loss to the literary world.

ಸಕಲೇಶಪುರ: ಕನ್ನಡ ಸಾಹಿತ್ಯ ಲೋಕದ ಮೇರು ಸಾಹಿತಿ ಎಸ್.ಎಲ್. ಭೈರಪ್ಪ ಅವರ ಅಗಲಿಕೆಯು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಸಾಹಿತಿ ಲೀಲಾ ಹೇಳಿದರು.

ಪಟ್ಟಣದ ಪುರಭವನದ ಮುಂಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಭೈರಪ್ಪ ಅವರ ಕಾದಂಬರಿಗಳು ಕನ್ನಡ ಓದುಗರ ಮನಸ್ಸಿನಲ್ಲಿ ಅಳಿಯದ ಗುರುತು ಮೂಡಿಸಿವೆ. ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಅಸಮಾನತೆ, ಸಂಪ್ರದಾಯಗಳ ಒತ್ತಡ, ಗಂಡು-ಹೆಣ್ಣು ಭೇದಭಾವ ಇತ್ಯಾದಿ ವಿಷಯಗಳನ್ನು ಅವರು ತಮ್ಮ ಕಾದಂಬರಿಗಳಲ್ಲಿ ದಶಕಗಳ ಹಿಂದೆಯೇ ಎತ್ತಿಹಿಡಿದರು. ಓದುಗರಿಗೆ ಹೊಸ ದಾರಿ ತೋರಿಸುವ ಶಕ್ತಿ ಅವರ ಸಾಹಿತ್ಯದಲ್ಲಿತ್ತು. ಭೌತಿಕವಾಗಿ ಅವರು ನಮ್ಮಲ್ಲಿ ಇರದಿದ್ದರೂ, ಅವರ ಕೃತಿಗಳು ಓದುಗರ ಹೃದಯಗಳಲ್ಲಿ ಎಂದೆಂದಿಗೂ ಜೀವಂತವಾಗಿರುತ್ತವೆ ಎಂದು ಅಭಿಪ್ರಾಯಪಟ್ಟರು.

ಹೋರಾಟಗಾರ ನಾರಾಯಣ ಆಳ್ವ ಮಾತನಾಡಿ, ಭೈರಪ್ಪ ಅವರು ತಮ್ಮ ಜೀವನದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಿ, ಪರಿಶ್ರಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ಶ್ರೇಷ್ಠ ಸ್ಥಾನ ಗಳಿಸಿದರು. ಪರ್ವ ಸೇರಿದಂತೆ ಅನೇಕ ಕಾದಂಬರಿಗಳು ಅವರ ಕೀರ್ತಿಯನ್ನು ಹೆಚ್ಚಿಸಿವೆ. ಅವರ ಕೃತಿಗಳು ಚಲನಚಿತ್ರಗಳಾಗಿಯೂ ಜನಮನ ತಟ್ಟಿವೆ. ಪದ್ಮಭೂಷಣ ಪ್ರಶಸ್ತಿ ಪಡೆದಂತಹ ಭೈರಪ್ಪ ಅವರ ಅಗಲಿಕೆಯಿಂದ ಕರ್ನಾಟಕವೇ ದುಃಖದಲ್ಲಿದೆ ಎಂದು ಹೇಳಿದರು.

ವೀರಶೈವ ಸಮಾಜದ ಮುಖಂಡ ದಿವಾನ್ ದೇವರಾಜ್ ಮಾತನಾಡಿ, ಭೈರಪ್ಪ ನಮ್ಮ ಹಾಸನ ಜಿಲ್ಲೆಯವರಾಗಿದ್ದು, ಜಿಲ್ಲೆಯ ಹೆಮ್ಮೆ. ಅವರ ವಂಶವೃಕ್ಷ ಕಾದಂಬರಿಯೇ ಚಿತ್ರವಾಗಿ ಜನಪ್ರಿಯತೆ ಪಡೆದಿತ್ತು. ಇಂತಹ ಸಾಹಿತಿಯನ್ನು ಕಳೆದುಕೊಂಡು ನಾವು ದುಃಖಿತರಾಗಿದ್ದೇವೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಹೇಳುದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷೆ ಶಾರದ ಗುರುಮೂರ್ತಿ, ಕಾರ್ಯದರ್ಶಿ ಯೋಗೇಶ್ ಕಶ್ವ ಖಾದರ್, ಸುರೇಶ್ ನಂದಿಕೃಪ, ರಾಜು, ಸತೀಶ್, ಜಗದೀಶ್, ಮೀನಾಕ್ಷಿ ಖಾದರ್, ಹರೀಶ್, ಅಶೋಕ್ ಕಡಗರಹಳ್ಳಿ, ಸುರೇಶ್ ಆಳ್ವ, ಪ್ರೇಮ್ ನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!