1.4 C
Munich
Home News ಹಾಸನದಲ್ಲಿ ಚಿನ್ನಾಭರಣ ಖರೀದಿಗೆಂದು ಬಂದ ತಾಯಿ ಮಗುವನ್ನೇ ಮರೆತರು: ಕರಗಿದ ಅಪಹರಣದ ಆತಂಕ-ಕಂದನ ಕಾಪಾಡಿದ ಮಹಿಳೆ

ಹಾಸನದಲ್ಲಿ ಚಿನ್ನಾಭರಣ ಖರೀದಿಗೆಂದು ಬಂದ ತಾಯಿ ಮಗುವನ್ನೇ ಮರೆತರು: ಕರಗಿದ ಅಪಹರಣದ ಆತಂಕ-ಕಂದನ ಕಾಪಾಡಿದ ಮಹಿಳೆ

ಹಾಸನ: ಮಹಿಳೆಯರು ಶಾಪಿಂಗ್ ಅಂದರೆ ಜಗವನ್ನೇ ಮರೆಯುತ್ತಾರೆ. ಆದರೆ ಹಾಸನದಲ್ಲೊಬ್ಬರು ಮಹಾತಾಯಿ ಮಗುವನ್ನೇ ಮರೆತು ಚಿನ್ನಾಭರಣ ಶಾಪಿಂಗ್ ಮಾಡಿ ಬಂದು ಮಗು ಕಳೆದಿದೆ ಎಂದು ಪೇಚಾಡಿದ್ದಾರೆ.

ಹಾಸನ ನಗರದ ಗಾಂಧಿ ಬಜಾರ್‌ನಲ್ಲಿ ಚಿನ್ನಾಭರಣ ಖರೀದಿಗೆಂದು ಅಂಗಡಿಯೊಂದಕ್ಕೆ ಬಂದ ತಾಯಿಯೊಬ್ಬರು ತಮ್ಮ ಎರಡೂವರೆ ವರ್ಷದ ಮಗಳನ್ನೇ ಜ್ಯೂವೆಲರಿ ಶಾಪ್‌ನಲ್ಲಿ ಮರೆತು ಹೋಗಿದ್ದರು. ಅದೃಷ್ಟವಶಾತ್ ಪ್ರಕರಣ ಸುಖಾಂತ್ಯಗೊಂಡಿದ್ದು, ಮಗುವನ್ನು ರಕ್ಷಿಸಿದ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ತಾಯಿಗೆ ಹಸ್ತಾಂತರಿಸಿದರು.

ಉಷಾ ಎಂಬ ಮಹಿಳೆ ತಮ್ಮ ಪುತ್ರಿ ಸುಪ್ರಿಯಾಳ ಜೊತೆ ಚಿನ್ನಾಭರಣ ಖರೀದಿಗೆಂದು ಗಾಂಧಿ ಬಜಾರ್‌ನ ಜ್ಯೂವೆಲರಿ ಶಾಪ್‌ಗೆ ಬಂದಿದ್ದರು. ಚಿನ್ನ ಖರೀದಿಯ ತಾಕಲಾಟದಲ್ಲಿ ಮಗುವನ್ನು ಶಾಪ್‌ನಲ್ಲಿ ಮರೆತು ಹೊರಗೆ ಬಂದಿದ್ದಾರೆ. ಈ ವೇಳೆ ಸುಪ್ರಿಯಾ ಅಳುತ್ತಿರುವುದನ್ನು ಕಂಡ ಸಿದ್ದಯ್ಯ ನಗರದ ಭವಾನಿ ಎಂಬ ಮಹಿಳೆ ಮಗುವನ್ನು ಸಂತೈಸಿದ್ದಾರೆ. ಆದರೆ, ಪೋಷಕರು ಪತ್ತೆಯಾಗದ ಹಿನ್ನೆಲೆಯಲ್ಲಿ ಭವಾನಿ ಮಗುವನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ.

ಮಗಳು ಕಾಣೆಯಾಗಿರುವುದನ್ನು ಗಮನಿಸಿದ ಉಷಾ, ತಾವು ಮಗು ಮರೆತು ಬಂದಿರುವುದನ್ನು ಮುಚ್ಚಿಟ್ಟು ಮಗು ಕಳುವಾಗಿದೆ ಎಂದು ಹಾಸನ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪೊಲೀಸರು ಮಗುವಿಗಾಗಿ ಹುಡುಕಾಟ ಆರಂಭಿಸಿದಾಗ, ಮಗುವನ್ನು ಭವಾನಿ ಎಂಬವರು ಕರೆದೊಯ್ದಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು.‌ ಇದರಿಂದ ಮಹಿಳೆಯೇ ಮಗುವನ್ನು ಅಪಹರಿಸಿದ್ದಾರೆ ಎಂದು ಭಾವಿಸಲಾಗಿತ್ತು.

ಆದರೆ ಭವಾನಿ ಅವರು ಮಗುವಿಗೆ ಊಟ ಮಾಡಿಸಿ, ನಂತರ ಪೊಲೀಸರಿಗೆ ಒಪ್ಪಿಸಲು ಠಾಣೆಗೆ ಬಂದರು.‌ ಅಗ ಮಗು ಅಪಹರಣ ಆಗಿಲ್ಲ. ಬದಲಿಗೆ ತಾಯಿಯೇ ಮರೆತು ಬಂದಿದ್ದಾರೆ ಎನ್ನುವುದು ದೃಢವಾಯಿತು.

ಪೊಲೀಸರು ವಿಷಯ ಮನವರಿಕೆ ಆದ ನಂತರ ಭವಾನಿ ಅವರ ಸಮ್ಮುಖದಲ್ಲಿ ಸುಪ್ರಿಯಾಳನ್ನು ತಾಯಿ ಉಷಾ ವಶಕ್ಕೆ ನೀಡಿದರು.

ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣ ಸುಖಾಂತ್ಯಗೊಂಡಿದ್ದು, ಯಾವುದೇ ಕಾನೂನು ಕ್ರಮಕ್ಕೆ ಒಳಗಾಗದೆ ಪರಿಹಾರವಾಗಿದೆ.

error: Content is protected !!