ದಾವಣಗೆರೆ, ನ. 5: ಭೂಮಿಗೆ ಸೇರಿದ ಬಳಿಕ ಕೊಳೆಯದ ಅಥವಾ ಕರಗದ ಪ್ಲಾಸ್ಟಿಕ್ ಅನ್ನು ಬಳಸುವ ಜೀವನ ಕ್ರಮವನ್ನು ಬದಲಾಯಿಸಿಕೊಳ್ಳಲೇಬೇಕು. ಪ್ಲಾಸ್ಟಿಕ್ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡಿ ಅಂತಿಮವಾಗಿ ನಮ್ಮ ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿ ತಿಳಿಸಿದರು.
ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಸಂಯುಕ್ತಾಶ್ರಯದಲ್ಲಿ ದಾವಣಗೆರೆಯಲ್ಲಿ ನಡೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಿಎಂ ನರೇಂದ್ರಸ್ವಾಮಿ ಅವರು, ಭವಿಷ್ಯಕ್ಕೋಸ್ಕರ ಶಿಕ್ಷಣ ಪಡೆಯುವುದು ಎಷ್ಟು ಮುಖ್ಯವೋ ಭವಿಷ್ಯಕ್ಕಾಗಿ ಪರಿಸರ ಉಳಿಸುವುದು ಅಷ್ಟೇ ಮುಖ್ಯ. ಇದಕ್ಕೆ ಸಾರ್ವಜನಿಕರ ಮತ್ತು ಸ್ಥಳೀಯ ಆಡಳಿತದ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ
ಶಕ್ತಿ ಯೋಜನೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ಪೂರಕವಾದ ಕೊಡುಗೆ ನೀಡಿದೆ. ಶಕ್ತಿ ಯೋಜನೆಯಿಂದ ಜನ ವಿಶೇಷವಾಗಿ ಮಹಿಳೆಯರು ಸಾರ್ವಜನಿಕ ಸಾರಿಗೆಯನ್ನು ಬಳಸಲು ಪ್ರೋತ್ಸಾಹ ನೀಡಿದಂತಾಗಿದೆ ಎಂದು ತಿಳಿಸಿದರು.
ಹಾಲಿನ ಪಾಕೆಟ್ ಅನ್ನು ಮೂಲೆಯಲ್ಲಿ ಕತ್ತರಿಸಿ ತುಣಕನ್ನು ಯಾವುದೇ ರೀತಿಯಲ್ಲಿ ಸಂಸ್ಕರಿಸದೆ ಎಸೆಯಲಾಗುತ್ತದೆ. ಅದು ಭೂಮಿ ಅಥವಾ ಪರಿಸರವನ್ನು ಸೇರುತ್ತಿದೆ. ಪ್ಲಾಸ್ಟಿಕ್ ಕೊಳೆಯುವ ಅಥವಾ ಕೊರೆಯುವ ಪದಾರ್ಥವಲ್ಲ. ಪ್ಲಾಸ್ಟಿಕ್ ಪ್ರಪಂಚಕ್ಕೆ ಮಾರಕ. ಈ ಅಪಾಯದಿಂದ ಪಾರಾಗಲು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 69 ರೈಸ್ ಮಿಲ್ ಗಳಿದ್ದು, ಆ ಪೈಕಿ ದಾವಣಗೆರೆ ನಗರವೊಂದರಲ್ಲೇ 43 ರೈಸ್ ಮಿಲ್ ಗಳಿವೆ. ಇದಲ್ಲದೆ ಸುಮಾರು ಒಂದು ಸಾವಿರ ಮಂಡಕ್ಕಿ ತಯಾರಿಕಾ ಕೇಂದ್ರಗಳಿವೆ. ಇವುಗಳಿಂದ ವಾಯು ಮಾಲಿನ್ಯ ಜಾಸ್ತಿಯಾಗಿದೆ.
ಮಂಡಕ್ಕಿ ತಯಾರಿಕಾ ಕೇಂದ್ರಗಳನ್ನು ಸ್ಥಳಾಂತರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು.
ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಟ್ಟು 396 ಕೈಗಾರಿಕೆಗಳಿದ್ದು ಅವುಗಳಿಂದ ಹೊರಬರುತ್ತಿರುವ ರಾಸಾಯನಿಕಯುಕ್ತ ನೀರು ತುಂಗಾ ನದಿಗೆ ಸೇರುತ್ತಿದ್ದು ಜಲ ಮಾಲಿನ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ 15 ಕಡೆ ತುಂಗಾಭದ್ರಾ ನದಿಯ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದಲ್ಲದೆ ವರದಾ ನದಿಗೆ ಬಿಡಲಾಗುತ್ತಿರುವ ತ್ಯಾಜ್ಯಗಳ ಬಗ್ಗೆಯೂ ಮಂಡಳಿ ನಿಗಾ ಇಟ್ಟಿದ್ದು ಪ್ರತಿ ತಿಂಗಳು ನೀರಿನ ಗುಣಮಟ್ಟ ಪ್ರರೀಕ್ಷೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ 1974ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿ ಮಾಲಿನ್ಯ ನಿಯಂತ್ರಣಕ್ಕೆ ಮುನ್ನುಡಿ ಬರೆದರು. ಈಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 50 ವರ್ಷ ಪೂರೈಸಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವುದು ಸುವರ್ಣ ಮಹೋತ್ಸವದ ಗುರಿಯಾಗಿದೆ ಎಂದು ನರೇಂದ್ರಸ್ವಾಮಿ ತಿಳಿಸಿದರು.
ಶ್ರೀಮತಿ ಇಂದಿರಾ ಗಾಂಧಿ ಅವರು ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪನೆ ಮಾಡಿರುವುದು ಮಾತ್ರವಲ್ಲ, ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಹಲವು ಕಾಯಿದೆಗಳನ್ನು ಜಾರಿಗೆ ತಂದರು. 1972ರಲ್ಲಿ ರಾಷ್ಟ್ರೀಯ ಪರಿಸರ ಯೋಜನೆ ಮತ್ತು ಸಮನ್ವಯ ಸಮಿತಿ ರಚಿಸಿದರು. ಅದೇ ವರ್ಷ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳ ಪ್ರಭೇದಗಳನ್ನು ರಕ್ಷಿಸಲು ವನ್ಯಜೀವಿ ಸಂರಕ್ಷಣಾ ಕಾಯ್ದೆ – 1972 ಅನ್ನು ಜಾರಿಗೆ ತಂದರು. 1973ರಲ್ಲಿ ಅಳಿವಿನಂಚಿನಲ್ಲಿರುವ ಹುಲಿಗಳನ್ನು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಲು ಪ್ರಾಜೆಕ್ಟ್ ಟೈಗರ್ ಎಂಬ ವನ್ಯಜೀವಿ ಸಂರಕ್ಷಣಾ ಯೋಜನೆಯನ್ನು ರೂಪಿಸಿದರು.
1974ರಲ್ಲಿ ಜಲ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದರು. ಅದೇ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿದರು. 1981ರಲ್ಲಿ ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ ಜಾರಿಗೆ ತಂದರು. ಸುವರ್ಣ ಮಹೋತ್ಸವದ ವೇಳೆ ಈ ಕಾಯಿದೆಗಳ ಬಗ್ಗೆ ಜನರಿಗೆ ತಿಳಿಸಲಾಗುತ್ತಿದೆ ಎಂದು ನರೇಂದ್ರಸ್ವಾಮಿ ಅವರು ವಿವರಿಸಿದರು.
1972ರಲ್ಲಿ ವಿಶ್ವಸಂಸ್ಥೆಯ ಸ್ಟಾಕ್‌ಹೋಮ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಇಂದಿರಾ ಗಾಂಧಿ ಅವರು ಇಡೀ ಜಗತ್ತಿಗೆ ಮೊದಲ ಬಾರಿಗೆ ಪರಿಸರ ಸಂರಕ್ಷಣೆಯ ಪಾಠ ಮಾಡಿದರು. ಹಾಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ವೇಳೆ ಇಂದಿರಾ ಗಾಂಧಿ ಅವರ ಕೊಡುಗೆಗಳನ್ನು ಸ್ಮರಿಸಿಕೊಳ್ಳಬೇಕಾದುದು ಮತ್ತು ಅವರು ತಂದ ಕಾಯಿದೆಗಳ ಬಗ್ಗೆ ತಿಳಿದುಕೊಳ್ಳುವುದು ಕೂಡ ನಮ್ಮ ಕರ್ತವ್ಯ ಎಂದು ಹೇಳಿದರು.
ರಾಜ್ಯದ 15 ಕಡೆ ಸುವರ್ಣ ಮಹೋತ್ಸವದ ಬೃಹತ್ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆಯಾದರೂ ರಾಜ್ಯದ ಎಲ್ಲಾ ಜಿಲ್ಲೆಗಳನ್ನೂ ಒಳಗೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ ವಿಧಾನಸಭಾ ಕ್ಷೇತ್ರ ಮಟ್ಟದಲ್ಲೂ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಹತ್ತು-ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮಾಂತರ ಪ್ರದೇಶಗಳಿಂದ ಹಿಡಿದು, ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯ ಮಟ್ಟದವರೆಗೆ ಏಕ ಕಾಲಕ್ಕೆ ದೊಡ್ಡ ಪ್ರಮಾಣದಲ್ಲಿ ಪರಿಸರ ಜಾಗೃತಿ ಮೂಡಿಸುವ ಹಾಗು ಮಾಲಿನ್ಯ ನಿಯಂತ್ರಣ ಮಾಡಬೇಕಾದ ಅಗತ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ನರೇಂದ್ರಸ್ವಾಮಿ ತಿಳಿಸಿದರು.
ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಅವರಿಗೆ ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ವಿಧಾನಸಭಾ ಕ್ಷೇತ್ರವಾರು ನಡೆಯುತ್ತಿರುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಜಿಲ್ಲಾ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 3 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ಮಾಡುವುದರಲ್ಲಿ ಯುವಕರ ಪಾತ್ರ ಬಹಳ ಮಹತ್ವದ್ದು ಎಂದು ಪರಿಗಣಿಸಿ ‘ಪರಿಸರದ ಬಗ್ಗೆ ರಿಲ್ಸ್ ಮಾಡಿ ಬಹುಮಾನ ಗೆಲ್ಲಿ’ ಎಂಬ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.
ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪರಿಸರ ಕಾಳಜಿ, ಸಂರಕ್ಷಣೆಯ ಸಂದೇಶ ಸಾರುವ ಉತ್ತಮ ರಿಲ್ಸ್ ಗೆ 50 ಸಾವಿರ ರೂಪಾಯಿ ಪ್ರಥಮ ಬಹುಮಾನ, 25 ಸಾವಿರ ರೂಪಾಯಿ ದ್ವಿತೀಯ ಬಹುಮಾನ ಹಾಗು 10 ಸಾವಿರ ರೂಪಾಯಿ ತೃತೀಯ ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.
ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಾರ್ವಜನಿಕರ ಹಾಗು ಸಂಘ ಸಂಸ್ಥೆಗಳ ಸಹಕಾರ ಕೂಡ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪರಿಸರ ಉಳಿವಿಗಾಗಿ ಹಾಗು ಮಾಲಿನ್ಯ ನಿಯಂತ್ರಣಕ್ಕಾಗಿ ಎಲೆ ಮರೆಯ ಕಾಯಿಗಳಂತೆ ಕೆಲಸ ಮಾಡುತ್ತಿರುವ ವ್ಯಕ್ತಿ ಮತ್ತು ಸಂಘ ಸಂಸ್ಥೆಗಳನ್ನು ಗುರುತಿಸಿ ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ ನೀಡಲಾಗುವುದು. ಇದಕ್ಕೆಂದೇ ಜಿಲ್ಲಾಧಿಕಾರಿಗಳು ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಮಾಲಿನ್ಯ ನಿಯಂತ್ರಣದ ಬಗ್ಗೆ ಚರ್ಚೆಯಾದ ಬಳಿಕ ರಾಜ್ಯ ಮಟ್ಟದಲ್ಲಿ ನವೆಂಬರ್ 18 ಮತ್ತು 19ರಂದು ಸುವರ್ಣ ಸಮಾರೋಪ ಸಮಾರಂಭ ಮಾಡಲಾಗಿದೆ ಎಂದು ಹೇಳಿದರು.










