ಹಾಸನ: ಅಪಾರ ಭಕ್ತರ ಆರಾಧ್ಯ ದೈವವಾಗಿರುವ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪ ಪ್ರಚಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ, ಹಾಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ಬಗ್ಗೆ ನಮಗೆ ಅನುಮಾನ ಮೂಡಿಸಿದ್ದು, ಶೀಘ್ರವೇ ಸತ್ಯಾಸತ್ಯತೆಯ ಸ್ಪಷ್ಟ ಚಿತ್ರಣ ಬಹಿರಂಗಪಡಿಸಬೇಕು ಎಂದು ಹಿರಿಯ ವೈದ್ಯ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದೇ ಬೇಡಿಕೆ ಮುಂದಿಟ್ಟು ಮಂಗಳವಾರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ನಾಳೆ ಬೆಳಗ್ಗೆ ೧೧ ಗಂಟೆಗೆ ಹೇಮಾವತಿ ಪ್ರತಿಮೆ ಬಳಿಯಿಂದ ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಮೆರವಣಿಗೆ ನಡೆಯಲಿದೆ, ವಿವಿಧ ಸಂಘಟನೆಗಳ ಸಾವಿರಾರು ಮಂದಿ ಭಾಗಿಯಾಗಲಿದ್ದಾರೆ. ನಂತರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಹಿತರಕ್ಷಣಾ ಸಮಿತಿ, ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತಾದಿಗಳ ವೇದಿಕೆ, ಹಾಸನಾಂಬ ಹಿತರಕ್ಷಣಾ ಸಮಿತಿ, ವಿಶ್ವಹಿಂದೂ ಪರಿಷತ್, ಹಿಂದೂ ಜನ ಜಾಗೃತಿ ಸಮಿತಿ, ಜೆಡಿಎಸ್, ಬಿಜೆಪಿ, ಡಾ.ರಾಜ್ ಅಭಿಮಾನಿಗಳ ಸಂಘ, ಹಾಸನ ಲಿಂಗಾಯತರ ಸಂಘ ಸೇರಿದಂತೆ ಹಲವು ಸಂಘಟನೆಗಳವರು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ನಿರಂತರವಾಗಿ ಹರಿದಾಡುತ್ತಿರುವ ಧರ್ಮಸ್ಥಳದ ಪಾವಿತ್ರö್ಯಕ್ಕೆ ಧಕ್ಕೆ ತರುವ ಅಸತ್ಯ ಹಾಗೂ ಅಪಪ್ರಚಾರ ಎಲ್ಲರಿಗೂ ತಿಳಿದಿರುವ ಸಂಗತಿ, ಯೂಟ್ಯೂಬ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಷಡ್ಯಂತ್ರ ನಿಲ್ಲಬೇಕು. ಧರ್ಮಸ್ಥಳದ ಬಗ್ಗೆ ತೇಜೋವಧೆ ಇಲ್ಲವಾಗಬೇಕು, ಎಳೆಯುತ್ತಿರುವ ಎಸ್‌ಐಟಿ ತನಿಖೆ ಬಗ್ಗೆ ಅನುಮಾನ ಮೂಡಿದೆ ಎಂದರು.
ಒಟ್ಟಿನಲ್ಲಿ ಬುರುಡೆ ಕೇಸ್ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಅಪಪ್ರಚಾರ ಮಾಡುವವರ ಮೇಲೆ ಕ್ರಮ ಆಗಬೇಕು. ಶವ ಹೂತಿಟ್ಟ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡಿ, ಸ್ಥಳ ತೋರಿಸುತ್ತಿರುವ ಅನಾಮಧೇಯ ವ್ಯಕ್ತಿಯನ್ನು ಮೊದಲು ಮಂಪರು ಪರೀಕ್ಷೆಗೆ ಒಳ ಪಡಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.










