ಹಾಸನ: ತಾಲೂಕಿನ ವಿವಿಧಡೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಜನರಿಗಾಗುತ್ತಿರುವ ತೊಂದರೆ ಹಾಗೂ ಕಾನೂನು ಬಾಹಿರ ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಾಂತಿಗ್ರಾಮ ಹೋಬಳಿ ವ್ಯಾಪ್ತಿಯ ಚಿಗಳ್ಳಿ, ಅಂಕನಹಳ್ಳಿ ಗ್ರಾಮಗಳಲ್ಲಿ ಕಲ್ಲು ಗಣಿಗಾರಿಕೆ ಹಾಗೂ ಕಲ್ಲುಪುಡಿ ಮಾಡುವ ಸ್ಟೋನ್ ಕ್ರಷರ್‌ಗಳು ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಇದರ ಬಗ್ಗೆ ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ನಿಯಮ ಉಲ್ಲಂಘಿಸಿ ಕ್ರಷರ್ ನಡೆಯುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ತಾವು ಕೊಡ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ, ಭರವಸೆ ಬಿಟ್ಟರೆ ಏನೂ ಆಗಿಲ್ಲ ಎಂದು ದೂರಿದರು.
ನಿಯಮಾನುಸಾರ ಕಲ್ಲು ಗಣಿ ಗುತ್ತಿಗೆ ನಡೆಸುವ ಅಕ್ಕ ಪಕ್ಕದಲ್ಲಿ ದೇವಸ್ಥಾನ, ಕೆರೆ, ಕೃಷಿ ಜಮೀನು, ಊರು, ಹೆಚ್‌ಆರ್‌ಪಿ ಜಮೀನು, ಮೀಸಲು ಅರಣ್ಯ ಇತ್ಯಾದಿ ಇರಬಾರದೆಂಬ ನಿಯಮವಿದೆ, ಆದರೆ ಕಲ್ಲು ಗಣಿ ಗುತ್ತಿಗೆ ಹಾಗೂ ಸ್ಟೋನ್ ಕ್ರಷರ್ ನಡೆಸುವವರು ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಗ್ರಾಮಸ್ಥರಿಗೆ, ಕೃಷಿಕರಿಗೆ ಬೆದರಿಕೆಯೊಡ್ಡಿ ಗಣಿಗಾರಿಕೆ ಮತ್ತು ಸ್ಪೋನ್ ಕ್ರಷರ್ ನಡೆಸುತ್ತಿದ್ದಾರೆ ಎಂದರು.
ಇನ್ನಾದರೂ ಕೂಡಲೇ ಈ ಬಗ್ಗೆ ಗಮನಹರಿಸಿ ಕ್ರಶರ್‌ಗಳನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಸುನಿಲ್, ರಮೇಶ್, ಮಲ್ಲೇಶ್, ಯೋಗೇಶ್, ವರದರಾಜು, ಯೋಗೇಶ್ ಇದ್ದರು.










