ಹಾಸನ: ರಾಜ್ಯದಲ್ಲಿ ದಲಿತರನ್ನು ಸಿಎಂ ಮಾಡಬೇಕು ಎಂದು ಜಿಲ್ಲಾ ದಲಿತಪರ ಹೋರಾಟಗಾರರ ಒಕ್ಕೂಟ ಒತ್ತಾಯಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ದಿನೇಶ್ ಮಾತನಾಡಿ, ಕಳೆದ ಒಂದು ತಿಂಗಳಿಂದ ರಾಜ್ಯ ರಾಜಕೀಯದಲ್ಲಿ ಬರೀ ಕಿತ್ತಾಟವನ್ನೇ ನೋಡುತ್ತಿದ್ದೇವೆ. ಸಿದ್ದರಾಮಯ್ಯ ಅವರೇ ಮುಂದುವರಿಯಬೇಕೆಂದು ಕೆಲವರು, ಡಿಕೆಶಿಗೆ ಅಧಿಕಾರ ಕೊಡಿ ಎಂದು ಕೆಲವರು ವಾದ ಮಾಡುತ್ತಿದ್ದಾರೆ. ಇವರನ್ನು ಬಿಟ್ಟು ದಲಿತರು ಸಿಎಂ ಆಗಬಾರದಾ ಎಂದು ಪ್ರಶ್ನಿಸಿದರು.
ದಲಿತರನ್ನು ಸಿಎಂ ಮಾಡಿ ಎಂದು ಸಮುದಾಯದ 36 ಶಾಸಕರೂ ಮಾತನಾಡುತ್ತಿಲ್ಲ, ಬರೀ ಜೀತಾ ಮಾಡಿಕೊಂಡೇ ಇರಬೇಕಾ ಎಂದು ಕೇಳಿದರು.
ಹಿಂದೆ ಡಾ.ಪರಮೇಶ್ವರ್ ಸಿಎಂ ಆಗುವ ಅವಕಾಶ ತಪ್ಪಿತು. ಈಗ ಸಿಎಂ ಆಗಲು ಅದೇ ಪರಮೇಶ್ವರ್, ಮುನಿಯಪ್ಪ, ಡಾ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ ಮೊದಲಾದವರಿದ್ದಾರೆ. ಅವರಿಗೂ ಅವಕಾಶ ಕೊಡಿ ಎಂದು ಒತ್ತಾಯಿಸಿದರು.
ಈ ಸಂಬಂಧ ಹಾಸನದಿಂದಲೇ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದ ಅವರು, ನಮ್ಮ ಬೇಡಿಕೆ ಈಡೇರಿರುವವರೆಗೂ ನಮ್ಮ ಶಕ್ತಿ ಏನೆಂದು ತೋರಿಸುತ್ತೇವೆ ಎಂದು ಎಚ್ಚರಿದರು.
ಯಾರೂ ಕೂಡ ಇದನ್ನು ಲಘುವಾಗಿ ಪರಿಗಣಿಸಬಾರದು. ಡಿ.ಕೆ.ಶಿವಕುಮಾರ್ ಅವರನ್ನೂ ಸಿಎಂ ಮಾಡಲಿ ಹಾಗೆಯೇ ದಲಿತರನ್ನೂ ಪರಿಗಣಿಸಲಿ ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದರು. ಸುದ್ದಿಗೋಷ್ಟಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ವಿಠಲ್, ಮಂಜು, ಭಾನುಪ್ರಕಾಶ್, ಮಧು, ಉಮೇಶ್, ಸದಾಶಿವ ಇದ್ದರು.








