ಹೊಳೆನರಸೀಪುರ: ಹೆಚ್.ಡಿ. ಕುಮಾರಸ್ವಾಮಿ ಕುಟುಂಬ ಸಮೇತರಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ

Union Minister H.D. Kumaraswamy, along with his wife, visited various temples in the taluk today and offered special prayers.

ಹೊಳೆನರಸೀಪುರ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಪತ್ನಿ ಸಮೇತ ಇಂದು ತಾಲೂಕಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಕುಟುಂಬ ಸಮೇತರಾಗಿ ಆಗಮಿಸಿ ತಾಲೂಕಿನ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಜೊತೆಯಲ್ಲಿ ಮಾಜಿ ಸಚಿವರು ಹೆಚ್.ಡಿ ರೇವಣ್ಣ ಅವರೂ ಇದ್ದರು.

ಅದಾದ ಬಳಿಕ ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಹೆಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ದಂಪತಿ ಮತ್ತು ಸ್ಥಳೀಯ ಶಾಸಕ ಹೆಚ್.ಡಿ.ರೇವಣ್ಣ ಅವರು ಭೇಟಿ ನೀಡಿದ ಸಂದರ್ಭದಲ್ಲಿ ವೇದ ಮಂತ್ರ ಘೋಷಗಳೊಂದಿಗೆ ಪೂರ್ಣ ಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರಿಗೆ ವಿಶೇಷ ಪೂಜಾ ಕೈಂಕರ್ಯ ಕೈಗೊಳ್ಳಲಾಯಿತು. ಹಲವು ತಿಂಗಳುಗಳ ನಂತರ ತಾಲೂಕಿಗೆ ಆಗಮಿಸಿದ ಹೆಚ್.ಡಿ.ಕೆ. ಅವರನ್ನು ಕಂಡು ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಸೇರಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹೆಚ್.ಕೆ.ಪ್ರಸನ್ನ, ತಹಸೀಲ್ದಾರ್ ರೇಣುಕುಮಾರ್ ಮತ್ತು ಪುರಸಭೆ ಮುಖ್ಯಾಧಿಕಾರಿ ಯು.ಎನ್.ಶಿವ ಶಂಕರ್ ಸೇರಿದಂತೆ ನೂರಾರು ಅಭಿಮಾನಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.