ಉಡುಪಿ : ಊರಿನ ಸಂಪ್ರದಾಯಕ್ಕೆ ಗೌರವ: ಅಲೆವೂರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ

ಉಡುಪಿ : ಉಡುಪಿ ಜಿಲ್ಲೆಯ ಅಲೆವೂರಿನ ಕಲ್ಯಾಣ ನಗರದಲ್ಲಿ ನಡೆದ ನೇಮೋತ್ಸವದಲ್ಲಿ ನಟ ರಕ್ಷಿತ್ ಶೆಟ್ಟಿ ಭಾಗವಹಿಸಿದರು. ಅಲೆವೂರು ದೊಡ್ಡಮನೆ ಮನೆತನದವರು ಸಂಪ್ರದಾಯಬದ್ಧವಾಗಿ ನಡೆಸಿಕೊಂಡು ಬರುತ್ತಿರುವ ಈ ನೇಮೋತ್ಸವವು ಭಕ್ತಿಭಾವದಿಂದ ನಡೆಯಿತು.

ಅಲೆವೂರು ದೊಡ್ಡಮನೆ ಕುಟುಂಬದ ಕುಡಿಯಾಗಿರುವ ರಕ್ಷಿತ್ ಶೆಟ್ಟಿ, ಕುಟುಂಬದವರೊಂದಿಗೆ ಸೇರಿ ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ಪಾಲ್ಗೊಂಡರು.

ನೇಮೋತ್ಸವದಲ್ಲಿ ಬಹಳ ಸಮಯ ಕುಳಿತು ದೈವಕ್ಕೆ ನಮಸ್ಕರಿಸಿದ ಬಳಿಕ ರಕ್ಷಿತ್ ಶೆಟ್ಟಿ ವಾಪಸಾದರು. ತಂದೆ–ತಾಯಿ ಹಾಗೂ ಕುಟುಂಬದ ಸದಸ್ಯರೊಂದಿಗೆ ರಾತ್ರಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿ ಗಮನ ಸೆಳೆಯಿತು.

ಸದ್ಯ ಮುಂಬರುವ ಸಿನಿಮಾಗಳ ಕಥೆ ಹಾಗೂ ಬರವಣಿಗೆಯಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿ, ಊರಿನ ಸಂಪ್ರದಾಯ ಮತ್ತು ಸಂಸ್ಕೃತಿಗೆ ಗೌರವ ಸಲ್ಲಿಸುವಂತೆ ನೇಮೋತ್ಸವದಲ್ಲಿ ಭಾಗವಹಿಸಿದರು.