- ಹಾಸನ (Hassan) ಹೊರವಲಯದ ಬೂವನಹಳ್ಳಿಯಲ್ಲಿ ನಡೆದ ದೇವೀರಮ್ಮ ಜಾತ್ರಾ ಮಹೋತ್ಸವದ ಬಂಡಿ ಹಬ್ಬದಲ್ಲಿ ಬರೋಬ್ಬರಿ 3 ಲಕ್ಷ ಜನರಿಗೆ ಭರ್ಜರಿ ಬಾಡೂಟ. ಒಂದೇ ದಿನದಲ್ಲಿ ಮಾಂಸ, ಮದ್ಯಕ್ಕಾಗಿ 20 ಕೋಟಿ ರೂ.ಗೂ ಅಧಿಕ ವೆಚ್ಚ! ಹಾಸನ-ಬೆಂಗಳೂರು ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್. ಸಂಪೂರ್ಣ ಡಿಟೇಲ್ಸ್.
Hassan|ಹಾಸನ: ನಗರದ ಹೊರವಲಯದ ಬೂವನಹಳ್ಳಿಯಲ್ಲಿ ಭಾನುವಾರ ನಡೆದ ದೇವೀರಮ್ಮ ಜಾತ್ರಾ ಮಹೋತ್ಸವದ ‘ಬಂಡಿ ಹಬ್ಬ’ ಕಂಡು ಕೇಳರಿಯದ ಇತಿಹಾಸ ಸೃಷ್ಟಿಸಿದೆ.
ಇಡೀ ಗ್ರಾಮವೇ ಅಕ್ಷರಶಃ ಮಾಂಸಾಹಾರದ ಘಮಲಿನಲ್ಲಿ ಮಿಂದೆದ್ದಿದ್ದು, ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಮಂದಿ ಭರ್ಜರಿ ಬಾಡೂಟ ಸವಿದಿದ್ದಾರೆ. 10 ವರ್ಷಗಳ ನಂತರ ಬಂದ ಈ ಆತಿಥ್ಯದ ಸಂಪ್ರದಾಯ ಪಾಲನೆ ಹಾಗೂ ಅತಿಥಿಗಳ ಸತ್ಕಾರಕ್ಕಾಗಿ ಗ್ರಾಮಸ್ಥರು ಒಂದೇ ದಿನದಲ್ಲಿ ಬರೋಬ್ಬರಿ 20 ಕೋಟಿ ರೂಪಾಯಿಗೂ ಅಧಿಕ ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ.
ಊರಿಡೀ ಘಮಘಮಿಸಿದ ಬಾಡೂಟ:
ಒಂದೂವರೆ ಸಾವಿರ ಮನೆಗಳಿರುವ ಬೂವನಹಳ್ಳಿ ಗ್ರಾಮದಲ್ಲಿ ಭಾನುವಾರ ಎಲ್ಲಿ ನೋಡಿದರೂ ಜನಸಾಗರ. ಪ್ರತಿ ಮನೆಯವರು ತಲಾ 200 ರಿಂದ 300 ಜನ ನೆಂಟರಿಷ್ಟರು ಹಾಗೂ ಸ್ನೇಹಿತರಿಗೆ ಆಮಂತ್ರಣ ನೀಡಿದ್ದರು. ಅತಿಥಿಗಳಿಗೆ ಊಟ ಬಡಿಸಲೆಂದೇ ಮನೆಗಳ ಎದುರು, ಸಮೀಪದ ಖಾಲಿ ಜಾಗಗಳಲ್ಲಿ ಬೃಹತ್ ಶಾಮೀಯಾನಗಳನ್ನು ಹಾಕಲಾಗಿತ್ತು. ಜಾಗದ ಕೊರತೆ ಇದ್ದವರು ಹಾಸನದ ಕಲ್ಯಾಣ ಮಂಟಪಗಳು ಹಾಗೂ ಕನ್ವೆನ್ಷನ್ ಹಾಲ್‌ಗಳನ್ನು ಬಾಡಿಗೆಗೆ ಪಡೆದು ಅಲ್ಲಿಯೇ ಅತಿಥಿ ಸತ್ಕಾರದ ವ್ಯವಸ್ಥೆ ಮಾಡಿದ್ದರು. ಖಾದ್ಯಗಳ ಘಮ, ಕುರಿ-ಕೋಳಿಗಳ ಮಾಂಸದೂಟದ ಭರ್ಜರಿ ಸಿದ್ಧತೆ ಇಡೀ ಹಬ್ಬದ ಕಳೆ ಹೆಚ್ಚಿಸಿತ್ತು.
ಬಂಡಿ ಹಬ್ಬದ 20 ಕೋಟಿಯ ಲೆಕ್ಕಾಚಾರ!
ಗ್ರಾಮದಲ್ಲಿ ನಡೆದ ಈ ಬೃಹತ್ ಮಟ್ಟದ ಆತಿಥ್ಯದ ವೆಚ್ಚವನ್ನು ಅಂದಾಜಿಸಿದರೆ ಕನಿಷ್ಠ 20 ಕೋಟಿ ರೂ. ದಾಟುತ್ತದೆ ಎಂದು ಲೆಕ್ಕಾಚಾರ ನಡೆಸಲಾಗುತ್ತಿದೆ. ಬೂವನಹಳ್ಳಿಯ 1,500 ಮನೆಗಳು ಸರಾಸರಿ 200 ಜನರಿಗೆ ಊಟ ಹಾಕಿದರೂ, ಕನಿಷ್ಠ 3 ಲಕ್ಷ ಜನರು ಊಟ ಮಾಡಿದ್ದಾರೆ.
- ಒಬ್ಬರ ಬಾಡೂಟಕ್ಕೆ ಕನಿಷ್ಠ 400 ರಿಂದ 500 ರೂ. ವೆಚ್ಚವಾದರೂ, ಕೇವಲ ಊಟಕ್ಕಾಗಿಯೇ 12 ರಿಂದ 15 ಕೋಟಿ ರೂ. ಖರ್ಚಾಗಿದೆ.
- ಬಾಡೂಟದ ಜೊತೆಗೆ ಮದ್ಯಪಾನದ ವ್ಯವಸ್ಥೆಯೂ ಜೋರಾಗಿಯೇ ಇದ್ದು, ಮದ್ಯದ ಖರೀದಿಗಾಗಿಯೇ 3 ರಿಂದ 4 ಕೋಟಿ ರೂ. ವಹಿವಾಟು ನಡೆದಿರುವ ಸಾಧ್ಯತೆಯಿದೆ.
- ಶಾಮೀಯಾನ, ಕನ್ವೆನ್ಷನ್ ಹಾಲ್ ಬಾಡಿಗೆ, ಕುರ್ಚಿ-ಟೇಬಲ್ ಹಾಗೂ ಇತರ ಸಿದ್ಧತೆಗಳಿಗೆ 1-2 ಕೋಟಿ ರೂ. ವೆಚ್ಚವಾಗಿದೆ. ಒಟ್ಟಾರೆಯಾಗಿ ಒಂದೇ ದಿನದ ಈ ಹಬ್ಬದಲ್ಲಿ ಗ್ರಾಮಸ್ಥರು 20 ಕೋಟಿ ರೂಪಾಯಿಗೂ ಮೀರಿದ ಆರ್ಥಿಕ ವಹಿವಾಟು ಹಾಗೂ ವೆಚ್ಚ ಮಾಡಿರುವುದು ಈ ಬಂಡಿಹಬ್ಬದ ಬೃಹತ್ ಸ್ವರೂಪಕ್ಕೆ ಕನ್ನಡಿ ಹಿಡಿದಿದೆ.
ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಹಾಸನ-ಬೆಂಗಳೂರು ಹೆದ್ದಾರಿ:
ಮಾಂಸಾಹಾರ ಸೇವನೆಗಾಗಿ ಸುತ್ತಮುತ್ತಲಿನ ಹಳ್ಳಿಗಳು, ಹಾಸನ ನಗರ ಹಾಗೂ ಬೇರೆ ಜಿಲ್ಲೆಗಳಿಂದಲೂ ಸಾವಿರಾರು ವಾಹನಗಳಲ್ಲಿ ನೆಂಟರಿಷ್ಟರು, ಸ್ನೇಹಿತರು ಬೂವನಹಳ್ಳಿಯತ್ತ ಹರಿದು ಬಂದಿದ್ದರು. ಪರಿಣಾಮ, ಹಾಸನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಸೇರಿದಂತೆ ಬೂವನಹಳ್ಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲೂ ಭಾನುವಾರ ಮಧ್ಯಾಹ್ನದಿಂದಲೇ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಾವಿರಾರು ವಾಹನಗಳು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿ, ವಾಹನ ಸವಾರರು ಪರದಾಡುವಂತಾಯಿತು. ಪರಿಸ್ಥಿತಿ ನಿಭಾಯಿಸಲು ಟ್ರಾಫಿಕ್ ಪೊಲೀಸರು ಹರಸಾಹಸ ಪಡಬೇಕಾಯಿತು.
ಭಾನುವಾರ ಬೆಳಗಿನಿಂದಲೇ ಆರಂಭವಾದ ಬಾಡೂಟದ ದರ್ಬಾರ್, ಮಧ್ಯರಾತ್ರಿಯಾದರೂ ಮುಗಿದಿರಲಿಲ್ಲ. ಸ್ನೇಹಿತರು, ಬಂಧು-ಬಳಗದೊಡನೆ ಸೇರಿ ಗ್ರಾಮಸ್ಥರು ತಡರಾತ್ರಿಯವರೆಗೂ ಬಂಡಿಹಬ್ಬದ ಸಂಭ್ರಮದಲ್ಲಿ ಮುಳುಗಿದ್ದರು. ಒಟ್ಟಿನಲ್ಲಿ ಬೂವನಹಳ್ಳಿಯ ದೇವೀರಮ್ಮನ ಬಂಡಿಹಬ್ಬ, ತನ್ನ ಬೃಹತ್ ಬಾಡೂಟ ಹಾಗೂ ಜನಸಾಗರದ ಮೂಲಕ ಹಾಸನ ಜಿಲ್ಲೆಯ ಮಟ್ಟಿಗೆ ಹೊಸದೊಂದು ದಾಖಲೆ ಬರೆದಿದೆ.
ಮಾಂಸಹಾರ ಹೋಟೆಲ್ ಗಳಿಗೆ ಫುಲ್ ಲಾಸ್:
ಸಾಮಾನ್ಗವಾಗಿ ಭಾನುವಾರಗಳಲ್ಲಿ ಮಾಂಸಹಾರ ಹೋಟೆಲ್ ಗಳಲ್ಲಿ ವ್ಯವಹಾರ ಹೆಚ್ಚಾಗಿರುತ್ತದೆ. ಭಾನುವಾರ ಬಾಡೂಟಕ್ಕೆ ಮಹತ್ವ ನೀಡುವುದು ಇದಕ್ಕೆ ಕಾರಣ. ಆದರೆ ನಿನ್ನೆ ಬೂವನಹಳ್ಳಿ ಹಬ್ಬದ ಪರಿಣಾಮವಾಗಿ ಜನರೆಲ್ಲ ಬಾಡೂಟ ಸವಿಯಲು ಅತ್ತ ಹೋಗಿದ್ದರಿಂದ ನಗರದ ನಾನ್ ವೆಜ್ ಹೋಟೆಲ್ ಗಳಲ್ಲಿ ವ್ಯವಹಾರವೇ ನಡೆಯಲಿಲ್ಲ. ಕೆಲವರು ಇದನ್ನು ಅರಿತು ಹೋಟೆಲ್ ಬಾಗಿಲು ಮುಚ್ಚಿದ್ದರು.
ದೇವೀರಮ್ಮನ ಜಾತ್ರಾ ಮಹೋತ್ಸವ ಸುತ್ತ 10 ಹಳ್ಳಿಗಳ ಜಾತ್ರೆ. ಹನ್ನೆರಡು ವರ್ಷಗಳ ನಂತರ ನಮ್ಮೂರಿನಲ್ಲಿ ಹಬ್ಬ ನಡೆದಿದೆ. ಅತಿಥಿ ಸತ್ಕಾರ ಜೋರಾಗಿರಬೇಕು ಎನ್ನುವ ಕಾರಣಕ್ಕೆ ಪ್ರತಿ ಮನೆಯವರೂ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರು. ನಿರೀಕ್ಷೆಯಂತೆ ಲಕ್ಷಾಂತರ ಜನರು ಆಗಮಿಸಿ ಆತಿಥ್ಯ ಸವಿದರು. ಅತಿಥಿಗಳು ಸಂತೃಪ್ತರಾದರೆ ನಮಗೆಲ್ಲ ಸಂತೋಷ ಎನ್ನುವುದು ನಮ್ಮೂರಿನ ಜನರ ಭಾವನೆ. ಟ್ರಾಫಿಕ್ ಜಾಮ್ ನಿಂದ ಜನರಿಗೆ ಸ್ಚಲ್ಪ ತೊಂದರೆಯಾದರೂ ಹಬ್ಬದ ಸಂಭ್ರಮಕ್ಕೆ ಧಕ್ಕೆಯಾಗಲಿಲ್ಲ.
-ಬಿ.ಆರ್. ಬೊಮ್ಮೇಗೌಡ, ಅಧ್ಯಕ್ಷರು, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ, ಬೂವನಹಳ್ಳಿ










