
ಹಾಸನ: ಟೈಮ್ಸ್ ಇಂಟರ್ನ್ಯಾಷನಲ್ ಶಾಲೆ ಹಾಗೂ ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ಸಹಯೋಗದಲ್ಲಿ ೧೦ ಸಾವಿರ ಗಿಡ ವಿತರಣೆ ಹಾಗೂ ನೆಡುವ ಕಾರ್ಯಕ್ರಮದ ಉದ್ಘಾಟನೆ ಜು.೧೯ ರಂದು ನಡೆಯಲಿದೆ ಎಂದು ಟೈಮ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟೈಮ್ಸ್ ಬಿ.ಕೆ. ಗಂಗಾಧರ್ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೯.೩೦ಕ್ಕೆ ವಿಜಯನಗರದ ಟೈಮ್ಸ್ ಶಾಲಾ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಗವರ್ನರ್ ರೊ.ಕೆ.ಪಾಲಾಕ್ಷ, ಅಸಿಸ್ಟೆಂಟ್ ಗವರ್ನರ್ ವಲಯ ರೊ.ಮಂಜುನಾಥ್, ಝೋನಲ್ ಲೆಫ್ಟಿನೆಂಟ್ ವಲಯ ರೊ.ಮಮತಾ ಪಟೇಲ್ ಭಾಗಿಯಾಗಲಿದ್ದಾರೆ ಎಂದು ವಿವರಿಸಿದರು.
ಹಸಿರು ಸಿರಿ ಸಸ್ಯೋತ್ಸವ ಕಾರ್ಯಕ್ರಮವನ್ನು ಕಳೆದ ೨ ವರ್ಷಗಳಿಂದ ನಡೆಸುಕೊಂಡು ಬರಲಾಗುತ್ತಿದೆ. ಪರಿಸರ ಬೆಳೆಸಬೇಕು. ಹಸಿರು ವೃದ್ಧಿಗಾಗಿ ಜಾಗೃತಿ ಮೂಡಿಸಬೇಕು ಎಂಬುದು ನಮ್ಮ ಕಾರ್ಯಕ್ರಮದ ಉದ್ದೇಶ, ಹಸಿರಿನ ಭವ್ಯವಾದ ನೋಟವನ್ನು ನಾವು ಸವಿಯಬೇಕಾದರೆ ಅದನ್ನು ಪೋಷಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಆಗಬೇಕು. ಅದಕ್ಕಾಗಿ ನಮ್ಮ ಶಿಕ್ಷಣ ಸಂಸ್ಥೆ ವತಿಯಿಂದ ಹಸಿರು ಸಿರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿ ಅವರ ಮೂಲಕ ಮನೆ ಅಥವಾ ಜಮೀನಿನಲ್ಲಿ ಬೆಳೆಸಲು ಪ್ರೇರೇಪಿಸಲಾಗುತ್ತಿದೆ. ಇದನ್ನು ಮಕ್ಕಳ ಕ್ಲಾಸ್ ಟೀಚರ್ ಮೇಲ್ವಿಚಾರಣೆ ಮಾಡಲಿದ್ದು, ಉತ್ತಮವಾಗಿ ಗಿಡ ಬೆಳೆಸಿದವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು ಎಂದರು.
ಇAದು ಬಹುತೇಕರು, ಪ್ರಕೃತಿ, ಪರಿಸರ, ಭೂಮಿಯಿಂದ ವಿಮುಖರಾಗುತ್ತಿದ್ದಾರೆ. ಮಕ್ಕಳಲ್ಲಿ ಪ್ರಕೃತಿ ಬಗೆಗಿನ ಸಹಜ ಒಲವನ್ನು ಮೂಡಿಸಿ, ಪೋಷಕರ ಜವಾಬ್ದಾರಿಯುತ ಪರಿಸರ ಸಂರಕ್ಷಣೆ ಕನಸಿಗೆ ನೀರೆರೆಯುವ ಪ್ರಯತ್ನದಲ್ಲಿ ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಇದೀಗ ಮೂರನೇ ವರ್ಷಕ್ಕೆ ಕಾಲಿಟ್ಟಿದ್ದೇವೆ ಎಂದರು
.
ಶನಿವಾರ ನಮ್ಮ ಶಾಲೆಯ ಸುಮಾರು ಒಂದೂವರೆ ಸಾವಿರ ವಿದ್ಯಾರ್ಥಿಗಳಿಗೆ ತಲಾ ೨ ಸಸಿಗಳಂತೆ ೩ ಸಾವಿರ ಸಸಿ ವಿತರಿಸುವ ಯೋಜನೆ ಹೊಂದಲಾಗಿದೆ. ಈ ಕಾರ್ಯಕ್ರಮಕ್ಕೆ ನಗರದ ಎಲ್ಲ ಶಾಲೆಯವರು ಸೇರಿದಂತೆ ಪ್ರತಿಯೊಬ್ಬರೂ ಕೈ ಜೋಡಿಸಿದರೆ ಪರಿಸರ ಉಳಿಸಿ ಎಂಬ ಮಾತು ಭಾಷಣದಲ್ಲೇ ಉಳಿಯದೆ, ಕೃತಿಗೆ ಬರಲಿದೆ. ಆಗ ಪರಿಸರ ಸಂವರ್ಧನೆ ಆಗಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಟೈಮ್ಸ್ ಶಿಕ್ಷಣ ಸಂಸ್ಥೆ ಪ್ರೌಢಶಾಲಾ ವಿಭಾಗದ ಕೋ ಆರ್ಡಿನೇಟರ್ ಸುಧೀರ್, ರೋಟರಿ ರಾಯಲ್ಸ್ ಕಾರ್ಯದರ್ಶಿ ಪಿ.ರವಿಕುಮಾರ್, ಖಜಾಂಚಿ ಹೆಚ್.ಕೆ.ದಿಲೀಪ್ ಕುಮಾರ್ ಇದ್ದರು.









