ಹಾಸನ: ನವದೆಹಲಿಯಲ್ಲಿ ಗುರುವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಹಾಸನ ನಗರದ ವಾಹನ ದಟ್ಟಣೆ ನಿರ್ವಹಣೆ ಹಾಗೂ 2030ರಲ್ಲಿ ನಡೆಯಲಿರುವ ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕದ ಸಿದ್ಧತೆಯಾಗಿ ನಗರಕ್ಕೆ ಹೊರ ವರ್ತುಲ ರಸ್ತೆ ನಿರ್ಮಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಒತ್ತಾಯಿಸಿರುವ ಪತ್ರವನ್ನು ಅವರಿಗೆ ನೀಡಿ ಮನವಿ ಸಲ್ಲಿಸಿದರು.
ಹಾಸನ ಜಿಲ್ಲೆಯನ್ನು ಅಂತಾರಾಷ್ಟ್ರೀಯ ಪ್ರವಾಸಿ ಸರ್ಕ್ಯೂಟ್‌ಗೆ ಸೇರಿಸುವ ನಿಟ್ಟಿನಲ್ಲಿ ಹಾಸನ ನಗರದ ಪೂರ್ವ ಭಾಗದಲ್ಲಿ ಔಟರ್ ರಿಂಗ್ ರೋಡ್ ನಿರ್ಮಾಣಕ್ಕೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಶಾಂತಿಗ್ರಾಮ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-75 ಅನ್ನು ಹಾಸನ ವಿಮಾನ ನಿಲ್ದಾಣದ ಮೂಲಕ ಹಾಗೂ ಹೂವಿನಹಳ್ಳಿ ಕಾವಲ್ ಬಳಿ ರಾಷ್ಟ್ರೀಯ ಹೆದ್ದಾರಿ-373 ಜೊತೆ ಸಂಪರ್ಕಿಸುವ ಹೊರ ವರ್ತುಲ ರಸ್ತೆಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ನಗರ ಟ್ರಾಫಿಕ್ ಡಿಕಂಜೆಷನ್ ಯೋಜನೆಯಡಿ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ.
ಈಗಾಗಲೇ ಈ ಕುರಿತು ಹಲವು ಬಾರಿ ಪತ್ರ ಬರೆದರೂ ಸ್ಪಂದನೆ ದೊರೆತಿಲ್ಲ ಎಂದು ವಿಷಾದ ವ್ಯಕ್ತಪಡಿಸಿರುವ ಅವರು, ಹಾಸನವನ್ನು ದ್ವಿತೀಯ ಶ್ರೇಣಿಯ ನಗರವೆಂದು ಗುರುತಿಸಲಾಗಿದ್ದು, ಕೈಗಾರಿಕಾ ಬೆಳವಣಿಗೆ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ನೆನಪಿಸಿದ್ದಾರೆ.
ಹಾಸನದ ಪ್ರಾಮುಖ್ಯತೆಯನ್ನು ಅವರು ಈ ರೀತಿ ವಿವರಿಸಿದ್ದಾರೆ:
– ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (MCF)
– ನಾಲ್ಕು ವಿಶೇಷ ಆರ್ಥಿಕ ವಲಯಗಳು (SEZ) – ಇದರಲ್ಲಿ 265 ಎಕರೆ ವಿಸ್ತೀರ್ಣದ ಆಹಾರ ಸಂಸ್ಕರಣಾ SEZ
– ಹಲವು ವೈದ್ಯಕೀಯ, ತಾಂತ್ರಿಕ ಮತ್ತು ಕೃಷಿ ಕಾಲೇಜುಗಳು, ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಕೇಂದ್ರಗಳು
– ಯುನೆಸ್ಕೋ ವಿಶ್ವ ಪರಂಪರೆ ತಾಣಗಳಾದ ಬೇಲೂರು-ಹಳೇಬೀಡು ಹೊಯ್ಸಳ ಸ್ಮಾರಕಗಳು (2023ರಲ್ಲಿ ಘೋಷಣೆ)
– 57 ಅಡಿ ಎತ್ತರದ ಏಕಶಿಲಾ ಗೊಮಟೇಶ್ವರ (ಬಾಹುಬಲಿ) ಪ್ರತಿಮೆ – ಶ್ರವಣಬೆಳಗೊಳ










