ಚನ್ನರಾಯಪಟ್ಟಣ ತಾಲ್ಲೂಕಿನಾದ್ಯಂತ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

There was widespread rain across the taluk on Sunday night and Monday morning, causing streams and ponds to overflow.

ಚನ್ನರಾಯಪಟ್ಟಣ: ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಹಾಗೂ ಸೋಮವಾರ ಮುಂಜಾನೆ ವ್ಯಾಪಕವಾಗಿ ಮಳೆ ಸುರಿದಿದ್ದು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

ಮಿಂಚು, ಗುಡುಗು, ಸಿಡಿಲು ಹಾಗೂ ಗಾಳಿಯ ಅಬ್ಬರವಿಲ್ಲದೆ ಸುರಿದ ಹದಮಳೆ ಕೃಷಿ ಪ್ರದೇಶಗಳಿಗೆ ಜೀವನಾಡಿಯಂತೆ ಕಾರ್ಯನಿರ್ವಹಿಸಿದ್ದು ರೈತರ ಮೊಗದಲ್ಲಿ ಸಂತಸ ತಂದಿದೆ.

ಪೂರ್ವ ಮುಂಗಾರಿನಿಂದಲೂ ವಾಡಿಕೆಯಂತೆ ಮಳೆಯಾಗಿರಲಿಲ್ಲ. ಆದರೆ ಈ ಒಂದು ವಾರದಿಂದ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದೆ.

ವ್ಯಾಪ್ತಿಯಲ್ಲಿ ಕಳೆದ ಬುಧವಾರ ರಾತ್ರಿ, ಗುರುವಾರ ಸಂಜೆ ಹಾಗೂ ಶನಿವಾರ ರಾತ್ರಿ ಹದವಾಗಿ ಮಳೆ ಸುರಿದಿತ್ತು. ಇನ್ನು ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗಿನ ಜಾವ ಧಾರಾಕಾರವಾಗಿ ಮಳೆ ಸುರಿದಿದ್ದು ಬರದ ಬೀಡಾಗಿದ್ದ ಭೂಮಿಗೆ ಮಳೆ ತಂಪೆರೆದಿದೆ.

ಯಡಬಿಡದೆ ಸುರಿದ ಮಳೆಯಿಂದ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಕೆರೆ-ಕಟ್ಟೆಗಳಲ್ಲಿ ಶೇ.50 ರಿಂದ 60 ರಷ್ಟು ನೀರು ಸಂಗ್ರಹವಾಗಿದೆ. ಇನ್ನೂ ಹಳ್ಳಗಳ ಮೂಲಕ ಕೆರೆಗಳಿಗೆ ನೀರು ಹರಿಯುತ್ತಿದೆ. ತೆಂಗಿನ ತೋಟಗಳು ಮತ್ತು ಕೃಷಿ ಜಮೀನುಗಳು ಜಲಾವೃತಗೊಂಡಿವೆ.

ತಾಲೂಕಿನ ಹಲವೆಡೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳದ ಪ್ರದೇಶಗಳಲ್ಲಿ ನೀರಿನಮಟ್ಟ ಏರಿಕೆಯಾಗಿದ್ದು ಸದ್ಯ ಕೆಲವೆಡೆ ಜಮೀನು ರಸ್ತೆಗಳು ಮುಳುಗಡೆಯಾಗಿವೆ. ಇನ್ನು ಹಿಂಗಾರು ಬೆಳೆಗಾರರು ಉತ್ತಮ ನಿರೀಕ್ಷೆ ಹೊಂದಿದ್ದಾರೆ.

ತಾಲ್ಲೂಕಿನ ಹಿರೀಸಾವೆ ಗ್ರಾಮದ ಚಿಕ್ಕ ಬೀದಿಯ ಜಯಮ್ಮ ಎಂಬುವರ ಮನೆಯ ಒಂದು ಭಾಗದ ಗೋಡೆ ಕುಸಿದು ಬಿದ್ದಿದೆ. ಯಾಳನಹಳ್ಳಿ ಗ್ರಾಮದಲ್ಲಿ ಮರವೊಂದು ಬಿದ್ದಿರುವ ಪರಿಣಾಮ ಪುಟ್ಟೇಗೌಡ ಎಂಬುವರ ಮನೆಗೆ ಹಾನಿಯಾಗಿದೆ.

ಇನ್ನು ಗಡಿಬಾಗದ ಕರಿಕ್ಯಾತನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಗೋಡೆ ಕುಸಿದು ಬಿದ್ದಿದೆ. ಮಕ್ಕಳ ಹಾಜರಾತಿ ಕೊರತೆ ಪರಿಣಾಮ ಹಲವು ವರ್ಷಗಳ ಹಿಂದೆಯೇ ಬಾಗಿಲು ಮುಚ್ಚಲಾಗಿದ್ದು ಸದ್ಯ ಯಾವುದೇ ಅಪಾಯ ಸಂಭವಿಸಿಲ್ಲ.

ತಾಲ್ಲೂಕಿನ ಹಿರೀಸಾವೆ, ಶ್ರವಣಬೆಳಗೊಳ ಹಾಗೂ ನುಗ್ಗೇಹಳ್ಳಿ ಹೋಬಳಿ ವ್ಯಾಪ್ತಿಯ ಬಹುತೇಕ ಕೆರೆಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸದ್ಯ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಉತ್ತಮ ಮಳೆಯು ಕಳೆದ ಕೆಲವು ತಿಂಗಳ ಬರಗಾಲದ ಬಳಿಕ ನೆಮ್ಮದಿಯ ವಾತಾವರಣವನ್ನು ನಿರ್ಮಿಸಿದೆ. ಇದರಿಂದ ರೈತರು ನೆಮ್ಮದಿ ಕಂಡಿದ್ದಾರೆ.