ಸಕಲೇಶಪುರ: ಅಕ್ರಮ ವಲಸಿಗರಿಂದ ಶಾಂತಿ–ಸುವ್ಯವಸ್ಥೆ ಹಾಳು: ಕ್ರಮಕ್ಕೆ ಒತ್ತಾಯಿಸಿ ವಿಎಚ್ಪಿ–ಭಜರಂಗದಳ ಮನವಿ

The Vishwa Hindu Parishad has alleged that illegal immigrants are disrupting peace and order in the city.

ಸಕಲೇಶಪುರ :ಅಕ್ರಮ ವಲಸಿಗರಿಂದ ನಗರದಲ್ಲಿ ಶಾಂತಿ–ಸುವ್ಯವಸ್ಥೆ ಹಾಳಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ.

ಗುರುವಾರ ಪೊಲೀಸ್ ಉಪಾಧೀಕ್ಷಕ ಮಾಲತೇಶ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ತಾಲೂಕು ವಿಎಚ್ಪಿ ಕಾರ್ಯಕರ್ತರು, ಅಸ್ಸಾಂನಿಂದ ಬಂದ ಮುಸ್ಲಿಂ ಸಮುದಾಯದವರಾಗಿದ್ದಾರೆ ಎನ್ನಲಾದ ಕೆಲವರು ನಗರದ ವಿವಿಧ ಭಾಗಗಳಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದು ನೆಲೆಸಿದ್ದಾರೆ ಎಂದು ತಿಳಿಸಿದ್ದಾರೆ. ಇವರು ಸ್ಥಳೀಯ ಕೂಲಿ ಕೆಲಸಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ಇವರ ಓಡಾಟ ಹೆಚ್ಚಾಗಿದ್ದು, ಗುಂಪುಗಾರಿಕೆ, ಹೊಡೆದಾಟ, ಅನಾವಶ್ಯಕ ಕೂಗಾಟಗಳಿಂದ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಇಷ್ಟು ದಿನಗಳು ನೆಮ್ಮದಿಯಿಂದ ಬದುಕುತ್ತಿದ್ದ ನಗರವಾಸಿಗಳು ಇವರ ವರ್ತನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ, ಇತ್ತೀಚೆಗೆ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಲ್ಲಿ ಇವರ ಕೈಚಳಕ ಕಂಡುಬರುತ್ತಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಾನೂನಿನ ಚೌಕಟ್ಟಿನೊಳಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ನೆಲೆಸಿರುವವರ ದಾಖಲಾತಿಗಳನ್ನು ಪರಿಶೀಲಿಸಿ, ದಾಖಲೆಗಳಿಲ್ಲದವರನ್ನು ಹಾಗೂ ದಾಖಲೆಗಳಿದ್ದರೂ ಶಾಂತಿ–ಸುವ್ಯವಸ್ಥೆಗೆ ಧಕ್ಕೆಯುಂಟುಮಾಡುವವರನ್ನು ನಗರದಿಂದ ಹೊರಗಿಡಬೇಕು ಎಂದು ಅವರು ಒತ್ತಾಯಿಸಿದರು.

ವಲಸಿಗರ ಹಾವಳಿಯಿಂದ ಇಲ್ಲಿನ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗಾವಕಾಶ ಕಡಿಮೆಯಾಗಿದ್ದು, ಎಲ್ಲ ಕ್ಷೇತ್ರಗಳಲ್ಲೂ ಇವರ ಪ್ರಾಬಲ್ಯದಿಂದ ಸ್ಥಳೀಯರಿಗೆ ನಿರೀಕ್ಷಿತ ಸಂಬಳ ದೊರೆಯುತ್ತಿಲ್ಲ ಎಂದು ದೂರಿದರು.

ಮುಖ್ಯವಾಗಿ ಪಟ್ಟಣದ ಹೇಮಾವತಿ ನಗರದಲ್ಲಿ ನಡೆದ ಘಟನೆಗಳು, ಕಳ್ಳತನದ ಆರೋಪಗಳು, ಗಾಂಜಾ ವ್ಯಾಪಾರ ಹಾಗೂ ಗೋಮಾಂಸ ಸಂಬಂಧಿತ ಚಟುವಟಿಕೆಗಳು ಸಕಲೇಶಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿವೆ ಎಂದು ಹೇಳಿದರು.

ಇದೇ ವೇಳೆ, ರಾಜ್ಯದಲ್ಲಿ ಸುದ್ದಿಯಾಗಿರುವ ಕೋಗಿಲು ಗ್ರಾಮದ ಘಟನೆಯಲ್ಲಿ ಕಾಂಗ್ರೆಸ್ ಸರ್ಕಾರ ತುಷ್ಟಿಕರಣ ರಾಜಕೀಯ ನಡೆಸುತ್ತಿದೆ ಎಂದು ಭಜರಂಗದಳ ತೀವ್ರವಾಗಿ ಖಂಡಿಸಿದೆ ಎಂದು ತಿಳಿಸಿದರು.

ಇನ್ನೂ ಗುರುವಾರ ನಡೆಯುವ ವಾರದ ಸಂತೆಯಲ್ಲಿ ಬಾಂಗ್ಲ ನಿವಾಸಿಗಳು ಅಂಗಡಿಗಳನ್ನು ಹಾಕುತ್ತಿರುವುದು ಕಂಡುಬಂದಿದ್ದು, ಅವುಗಳನ್ನು ತಕ್ಷಣ ತೆರವುಗೊಳಿಸಬೇಕೆಂದು ಸಂಘಟನೆ ಒತ್ತಾಯಿಸಿದೆ.

ಒಟ್ಟಾರೆ, ಸಕಲೇಶಪುರದ ಜನತೆಗೆ ಮತ್ತೆ ನೆಮ್ಮದಿ ಮತ್ತು ಭದ್ರತೆ ಒದಗಿಸುವಂತೆ ಅಧಿಕಾರಿಗಳಿಗೆ ಭಜರಂಗದಳ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಬಿರಡಹಳ್ಳಿ ಬಾಲಕೃಷ್ಣ, ಜಿಲ್ಲಾ ಸಹಕಾರ್ಯದರ್ಶಿ ಹರೀಶ ಕರಡಿಗಾಲ, ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್, ತಾಲ್ಲೂಕು ಕಾರ್ಯದರ್ಶಿ ರವಿ ಹರ್ಲೆ, ಹೆತ್ತೂರು ಪ್ರಖಂಡ ಅಧ್ಯಕ್ಷ ಸುರೇಶ್, ನಗರ ಅಧ್ಯಕ್ಷ ಮಹೇಂದ್ರ ಕುಮಾರ್, ನಗರ ಸಂಯೋಜಕ ಸುಜನ್, ಆಟೋ ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

The Vishwa Hindu Parishad has alleged that illegal immigrants are disrupting peace and order in the city.