ಸಕಲೇಶಪುರ: ಯುವಕರು ದುಶ್ಚಟಗಳಿಂದ ದೂರವಿದ್ದು ಕ್ರೀಡೆಗೆ ಆದ್ಯತೆ ನೀಡಬೇಕು: ಮೋದಿ ಕ್ರಿಕೆಟ್ ಕಪ್ ಉದ್ಘಾಟನೆಯಲ್ಲಿ ಶಾಸಕ ಸಿಮೆಂಟ್ ಮಂಜು

MLA Cement Manju said that youth should stay away from bad habits. For good health, sports, exercise, pranayama and physical exercises should be incorporated into daily life.

ಸಕಲೇಶಪುರ: ಯುವಕರು ದುಶ್ಚಟಗಳಿಂದ ದೂರ ಇರಬೇಕು. ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ, ವ್ಯಾಯಾಮ, ಪ್ರಾಣಾಯಾಮ ಹಾಗೂ ದೈಹಿಕ ಕಸರತ್ತುಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಕುನಿಗನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಮೋದಿಜನಕ ಕ್ರಿಕೆಟ್ ಕಪ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಪರಿಸ್ಥಿತಿಯಲ್ಲಿ ಕೆಲ ಯುವಕರು ಮಾದಕ ವಸ್ತುಗಳು, ಮದ್ಯಪಾನ ಹಾಗೂ ಧೂಮಪಾನದಂತಹ ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಹೆತ್ತವರು ತಮ್ಮ ಮಕ್ಕಳ ಮೇಲೆ ಅನೇಕ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಪೋಷಕರ ಕನಸುಗಳಿಗೆ ಧಕ್ಕೆ ಉಂಟಾಗದಂತೆ ಯುವಕರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಪ್ರಾಮಾಣಿಕತೆ, ಕಾರ್ಯಕ್ಷಮತೆ ಹಾಗೂ ಬದ್ಧತೆಯುಳ್ಳ ಆಡಳಿತದ ಮೂಲಕ ಭಾರತವನ್ನು ಜಗತ್ತಿನ ಪ್ರಮುಖ ಆರ್ಥಿಕ ಶಕ್ತಿಯಾಗಿ ರೂಪಿಸುತ್ತಿದೆ. ಪಾಶ್ಚಿಮಾತ್ಯ ದೇಶಗಳೇ ಭಾರತದ ಆರ್ಥಿಕ ಬೆಳವಣಿಗೆಯನ್ನು ಪ್ರಶಂಸಿಸುತ್ತಿವೆ ಎಂದು ಹೇಳಿದರು.

‘ವಿಕಸಿತ ಭಾರತ’ ಪರಿಕಲ್ಪನೆಯೊಂದಿಗೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಬಡವರು, ಮಹಿಳೆಯರು, ಯುವಕರು ಹಾಗೂ ರೈತರು ಹಿಂದುಳಿಯದಂತೆ ನೋಡಿಕೊಳ್ಳುವ ಪ್ರಧಾನಿಯ ದೃಷ್ಟಿಕೋನದಿಂದ ‘ವಿಶ್ವಗುರು’ ಭಾರತದ ಕನಸು ಸಾಕಾರಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೇತ್ರಾವತಿ ಮಂಜುನಾಥ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್, ಮುಖಂಡರಾದ ಪ್ರದೀಪ್ ನಿಡನೂರು, ಪ್ರಭು, ಪೂವಯ್ಯ, ಅಕ್ಷತಾ ಕೋಡಗಲವಾಡಿ, ಉಮಾನಾಥ್ ಸುವರ್ಣ, ರೇಣು ಸೇರಿದಂತೆ ಇತರರು ಉಪಸ್ಥಿತರಿದ್ದರು.

MLA Cement Manju said that youth should stay away from bad habits. For good health, sports, exercise, pranayama and physical exercises should be incorporated into daily life.