ಚನ್ನರಾಯಪಟ್ಟಣದ ಮುದಿಬೆಟ್ಟ ಕಾವಲಿನಲ್ಲಿ ಗ್ರಾಮಸ್ಥರು-ತಾಲ್ಲೂಕು ಅಧಿಕಾರಿಗಳ ಜಟಾಪಟಿ: ಏನಿದು ದೇಗುಲ ವಿವಾದ?

ಚನ್ನರಾಯಪಟ್ಟಣ: ತಾಲ್ಲೂಕಿನ ಮುದಿಬೆಟ್ಟ ಕಾವಲು ಗ್ರಾಮದ ಸರ್ವೇ ನಂಬರ್ ೧೧೮ ರಲ್ಲಿರುವ ೧೨ ಎಕರೆ ೫ ಗುಂಟೆ ಸರ್ಕಾರಿ ಬಂಜರು ಭೂಮಿಯನ್ನು ಧಾರ್ಮಿಕ ಹಾಗೂ ಜಾನುವಾರುಗಳ ಮೇವಿನ ಸಲುವಾಗಿ ಗೋಮಾಳವೆಂದು ಪರಿಗಣಿಸಿ ಕಾಯ್ದಿರಿಸಬೇಕು ಎಂದು ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ಮನವಿ ಮಾಡಿದರು.

ಗ್ರಾಮದ ಸರ್ವೇ ನಂಬರ್ ೧೧೮ ರಲ್ಲಿ ದೊಡ್ಡ ಬಂಡೆ ಸೇರಿ ಸುತ್ತುವರಿದಂತೆ ಒಟ್ಟು ೧೨.೫ ಎಕರೆ ಸರ್ಕಾರಿ ಬಂಜರು ಭೂಮಿ ಇದ್ದು ಬಂಡೆಯ ಮೇಲೆ ಶ್ರೀ ಆಂಜನೇಯಸ್ವಾಮಿ ದೇಗುಲ ನಿರ್ಮಿಸಲು ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದರು.

ವಿಚಾರ ತಿಳಿದು ಶುಕ್ರವಾರ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಬಿ.ಎಸ್.ಶಂಕರಪ್ಪ ಅವರು ಸ್ಥಳ ಪರಿಶೀಲಿಸಿದರು. ಈ ವೇಳೆ ತಹಸೀಲ್ದಾರ್ ಹಾಗೂ ಗ್ರಾಮಸ್ಥರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ತಹಸೀಲ್ದಾರ್ ಅವರು ಗ್ರಾಮಸ್ಥರಿಗೆ ಸಾಕಷ್ಟು ತಿಳಿ ಹೇಳಿದರು. ಹಿರೀಸಾವೆ ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ನಮ್ಮೂರು ಮುದಿಬೆಟ್ಟ ಕಾವಲು ನೂರಾರು ವರ್ಷಗಳಿಂದ ಹುಲ್ಲುಗಾವಲು ಪ್ರದೇಶವಾಗಿದ್ದು ಜಾನುವಾರುಗಳ ಮೇವಿಗೆ ಆಶ್ರಯವಾಗಿದೆ. ಆದರೆ ಇತ್ತೀಚಿನ ದಿನಗಳಿಂದ ಹುಲ್ಲುಗಾವಲು ಪ್ರದೇಶವು ಕೃಷಿ ಜಮೀನಾಗಿ ಪರಿವರ್ತನೆಗೊಂಡಿದ್ದು ಜಾನುವಾರುಗಳ ಮೇವಿಗೆ ಗೋಮಾಳವೇ ಇಲ್ಲದಾಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಮುದಿಬೆಟ್ಟಕಾವಲು, ಉಳ್ಳಾವಳ್ಳಿ, ಹೊಸಹಳ್ಳಿ, ಹೊನ್ನಶೆಟ್ಟಿಹಳ್ಳಿ, ಬೆಂಡೆಕೆರೆ, ಮೆಳ್ಳಹಳ್ಳಿ, ಗೌಡರಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳು ಈ ವ್ಯಾಪ್ತಿಗೆ ಒಳಪಡಲಿದ್ದು ಸದ್ಯಕ್ಕೆ ಸರ್ವೆ ನಂಬರ್ ೧೧೮ ರಲ್ಲಿರುವ ೧೨.೫ ಎಕರೆ ಪ್ರದೇಶ ಮಾತ್ರ ಉಳಿದಿದೆ. ಈ ಪ್ರದೇಶವನ್ನು ಸಾರ್ವಜನಿಕರ ಹಿತಾಸಕ್ತಿ ಸಲುವಾಗಿ ಉಳಿಸಿಕೊಡಿ ಎಂದು ತಹಸೀಲ್ದಾರ್ ಅವರಿಗೆ ಸ್ಥಳೀಯರು ಮನವಿ ಮಾಡಿದರು.

ನೂರಾರು ವರ್ಷಗಳಿಂದ ಈ ಬಂಡೆಯ ಮೇಲೆ ಶ್ರೀ ಮುದಿಬೆಟ್ಟದ ಆಂಜನೇಯಸ್ವಾಮಿಯ ಚಿಕ್ಕ ಗುಡಿ ಕಟ್ಟಿಕೊಂಡು ದನ-ಕುರಿ ಮೇಯಿಸುವವರು ಪೂಜಿಸುತಿದ್ದರು. ಅದನ್ನು ನಾವು ಮುಂದುವರಿಸಿಕಜೊAಡು ಪೂಜಿಸುತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಗುಡಿ ಹಾಳಾಗಿರುವುದರಿಂದ ತೆರವುಗೊಳಿಸಿ ದೇಗುಲ ನಿರ್ಮಿಸಲು ಮುಂದಾಗಿದ್ದೇವೆ. ದಯವಿಟ್ಟು ನಿರ್ಮಿಸಲು ಅವಕಾಶ ಕಲ್ಪಿಸಿಕೊಡಿ ಎಂದು ಮಹಿಳೆಯರು ಕೇಳಿಕೊಂಡರು.

ಬಳಿಕ ತಹಸೀಲ್ದಾರ್ ಬಿ.ಎಸ್.ಶಂಕರಪ್ಪ ಮಾತನಾಡಿ, ಈ ಜಾಗವು ಸರ್ಕಾರಿ ಬಂಜರು ಭೂಮಿಯಾಗಿದ್ದು ಇದನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಇಲ್ಲಿ ಸದ್ಯಕ್ಕೆ ದೇಗುಲ ನಿರ್ಮಾಣ ಹಾಗೂ ಇತರೆ ಸಲುವಾಗಿ ದುರುಪಯೋಗ ಪಡಿಸಿಕೊಳ್ಳಬಾರದು. ಅಗತ್ಯ ದಾಖಲಾತಿಗಳನ್ನು ಒದಗಿಸಿ ಸರ್ಕಾರದಿಂದ ಅನುಮತಿ ಪಡೆಯಬೇಕು. ಅಲ್ಲಿಯವರೆಗೂ ಯಾವುದೇ ಬೇರೆ ಬೆಳವಣಿಗೆಯಾಗಬಾರದು ಎಂದು ಗ್ರಾಮಸ್ಥರಿಗೆ ತಿಳಿಸಿದರು.

ದೇಗುಲ ನಿರ್ಮಾಣಕ್ಕೆ ಸಕಲ ಸಿದ್ಧತೆ:

ಮುದಿಬೆಟ್ಟ ಕಾವಲು ಬಂಡೆಯ ಮೇಲೆ ಈಗಾಗಲೆ ದೇಗುಲ ನಿರ್ಮಾಣಕ್ಕೆ ತಳಹದಿ ನಿರ್ಮಿಸಲಾಗಿದ್ದು ನೀರಿನ ತೊಟ್ಟಿ, ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ದೇಗುಲ ನಿರ್ಮಾಣಕ್ಕೆ ಕಲ್ಲು, ಜಲ್ಲಿ, ಎಂ-ಸ್ಯಾAಡ್ ಎಲ್ಲವನ್ನು ಸಿದ್ದಪಡಿಸಿಕೊಂಡಿದ್ದು ಆ.೧೩ ರಿಂದ ಆ.೧೭ ರ ವರಗೆ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ದೇಗುಲ ನಿರ್ಮಾಣಕ್ಕೆ ಸುತ್ತಮುತ್ತಲ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಲಾಗಿದೆ ಎಂದು ವಿಷಕಂಠೇಗೌಡ ತಿಳಿಸಿದರು.

ಚನ್ನರಾಯಪಟ್ಟಣ ಪಿಎಸ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಟಿ.ಬೊಮ್ಮೇಗೌಡ, ದಿಡಗ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಆರ್.ರತ್ನರಾಜ್, ಮಾಜಿ ಸದಸ್ಯ ಡಿ.ಬಿ.ವೆಂಕಟೇಶ್, ದಿಡಗ ಸೊಸೈಟಿ ಮಾಜಿ ಅಧ್ಯಕ್ಷ ಹೆಚ್.ಕೆ.ಯೋಗೇಶ್ ಇದ್ದರು.