ಹೊಳೆನರಸೀಪುರ: ಮೂರು ದಿನಗಳ ರಾಯರ ಆರಾಧನಾ ಮಹೋತ್ಸವದಲ್ಲಿ ಇಂದು ಮಧ್ಯಾರಾಧನೆ

ಹೊಳೆನರಸೀಪುರ: ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ೧೦೦೮ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದಂಗಳವರು ಹಾಗೂ ಶ್ರೀ ೧೦೦೮ ವಿದ್ಯಾರಾಜೇಶ್ವರ ತೀರ್ಥಶ್ರೀಪಾದಂಗಳವರ ಸಂಕಲ್ಪ  ಮೂರು ದಿನಗಳ ಪೂಜಾ ಮಹೋತ್ಸವದ ಅಂಗವಾಗಿ ಮಧ್ಯಾರಾಧನೆ ಪೂಜಾ ಮಹೋತ್ಸವ ವೈಭವದಿಂದ ಜರುಗಿತು.

ಶ್ರಾವಣ ಮಾಸದ ಕೃಷ್ಣ ಪಕ್ಷದ ಬಿದಿಗೆ ದಿನವಾದ ಸೋಮವಾರ ಬ್ರಾಹ್ಮೀ ಮಹೋರ್ತದಲ್ಲಿ ಸುಪ್ರಭಾತ ಸೇವೆ, ಆರಾಧನಾ ಮಹೋತ್ಸವ ಪ್ರಯುಕ್ತ ೧೦೮ ಲೀಟರ್ ಹಾಲಿನ ಅಭಿಷೇಕ, ವಿಶೇಷ ಪಂಚಾಮೃತ ಅಭಿಷೇಕ, ಅಲಂಕಾರ ನೆರವೇರಿಸಲಾಯಿತು. ಸರ್ವಲಾಂಕೃತ ರಥದಲ್ಲಿ ಶ್ರೀಗುರುರಾಯದ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಶ್ರೀ ಮಠದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ಕೋಟೆ ರಾಜಬೀದಿಯಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಮಹಾ ರಥೋತ್ಸವ ವೈಭವದಿಂದ ಜರುಗಿತು.

ಶ್ರೀ ಮಠದಲ್ಲಿ ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಮಹಿಳಾ ಹರಿದಾಸ ಸಂಘದ ಮಹಿಳೆಯರು ರಥೋತ್ಸವದಲ್ಲಿ ಕೀರ್ತನೆಗಳನ್ನು ಹಾಡುತ್ತಾ ಸಾಗಿದರು. ಉಡುಪಿಯ ಬಾಲಕೃಷ್ಣಭಟ್ ನೇತೃತ್ವದಲ್ಲಿ ತಂಡದವರು ಚಂಡೆವಾದನ ಮಂಗಳವಾಧ್ಯ ನುಡಿಸಿ ಶ್ರೀ ಗುರುರಾಯರ ಆರಾಧನಾ ಮಹೋತ್ಸವಕ್ಕೆ ವಿಶೇಷ ಮೆರಗನ್ನು ತಂದರು