ಹೊಳೆನರಸೀಪುರ: ತಾಲ್ಲೂಕಿನ ಸಮಸ್ತ ಹಿಂದೂ ಬಾಂಧವರು ಮತ್ತು ಶ್ರೀ ಹನುಮೋತ್ಸವ ಆಚರಣಾ ಸೇವಾ ಸಮಿತಿ ವತಿಯಿಂದ ಇಂದು ಆಯೋಜಿಸಲಾಗಿದ್ದ ದ್ವೀತಿಯ ವರ್ಷದ ಬೃಹತ್ ಸಾರ್ವಜನಿಕ ಶ್ರೀ ಹನುಮೋತ್ಸವವು ಸರ್ವಧರ್ಮ ಸಮನ್ವಯ ಭಾವೈಕ್ಯತೆಗೆ ಮುನ್ನುಡಿ ಬರೆಯಿತು.
ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬೆಳಿಗ್ಗೆ 8 ಗಂಟೆಯ ಶುಭ ಲಗ್ನದಲ್ಲಿ ಶ್ರೀ ಹನುಮ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯ ಕೈಗೊಂಡ ನಂತರ, ಶ್ರೀ ಯವರ ಉತ್ಸವಕ್ಕೆ ಬೆಳಿಗ್ಗೆ 10.30 ಗಂಟೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಾವಿರಾರು ಹನುಮಾಭಿಮಾನಿಗಳು
ಜೈ ಶ್ರೀರಾಮ್. . . ಜೈ ಶ್ರೀರಾಮ್. . . ಎಂದು ಮುಗಿಲು ಮುಟ್ಟುವ ವರೆಗೆ ಜಯಘೋಷಣೆ ಮೊಳಗಿಸಿದರು.
ವೇದ ಮಂತ್ರ ಘೋಷಗಳೊಂದಿಗೆ ವಿವಿಧ ಸಾಂಸ್ಕೃತಿಕ, ಜಾನಪದ ಕಲಾ ತಂಡಗಳು ಮತ್ತು ಕಿವಿಗಡಚಿಕ್ಕುವ ಡಿ.ಜೆ.ಸಂಗೀತದೊಂದಿಗೆ ಸಾರ್ವಜನಿಕರೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಹನುಮೋತ್ಸವದ ಶೋಭಾಯಾತ್ರೆ ನಡೆಯಿತು.
ಎಲ್ಲಿ ನೋಡಿದರೂ ಹನುಮನ ಭಾವಚಿತ್ರಗಳು ಎಲ್ಲರ ಕೊರಳಲ್ಲೂ ಕೇಸರಿ ಬಣ್ಣದ ಶಾಲು ಮತ್ತು ಅದರೊಂದಿಗೆ ರಾಮ ಮತ್ತು ಹನುಮನ ಭಾವ ಚಿತ್ರಗಳು ಪ್ರತಿಬಿಂಬಿಸಿದವು.
ಮಧ್ಯಾಹ್ನ 1 ಗಂಟೆಗೆ ತಾಲ್ಲೂಕು ಕಚೇರಿಯ ಮುಂಭಾಗ ಇರುವ ಸಾರ್ವಜನಿಕ ಸಮುದಾಯ ಭವನದಲ್ಲಿ ಸಾವಿರಾರು ಜನರಿಗೆ ಪ್ರಸಾದ ವಿತರಣೆ ಏರ್ಪಡಿಸಲಾಗಿತ್ತು.
ನಂತರ ಪ್ರಖ್ಯಾತ ಕಿರುತೆರೆ ಮತ್ತು ಚಲನಚಿತ್ರ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಸ್ವಯಂ ಪ್ರೇರಣೆಯಿಂದ ಅಂಗಡಿ ಮಾಲೀಕರು ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ ಸಹಕಾರ ನೀಡಿ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಪಟ್ಟಣದ ಎಲ್ಲಾ ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು. ಎಲ್ಲಾ ಸಮಸ್ತ ಹಿಂದು ಬಾಂಧವರು ಮತ್ತು ಹನುಮಾಭಿಮಾನಿಗಳು ಮತ್ತು ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಹನುಮೋತ್ಸವವನ್ನು ಯಶಸ್ವಿಗೊಳಿಸಿದರು.
The second annual grand public Sri Hanuman festival organized today by all Hindus and the Sri Hanuman Celebration Service Committee marked the beginning of interfaith harmony and unity.









