ಹಾಸನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 63.34 ಕೋಟಿ ಮಂಜೂರಾತಿ: ಸಚಿವ ಕೃಷ್ಣಬೈರೇಗೌಡ ಹಾಗೂ ಸಂಸದ ಶ್ರೇಯಸ್ ಪಟೇಲ್ ಹರ್ಷ

The revised estimate of Rs 63.34 crore for the infrastructure of the super specialty hospital being built on the premises of the Hassan Institute of Medical Sciences received administrative approval in the Cabinet meeting today.

ಹಾಸನ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮೂಲ ಸೌಕರ್ಯಗಳಿಗೆ 63.34 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಇಂದು ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಲಭಿಸಿದೆ.

ಈ ಕುರಿತು ಸಂತೋಷ ವ್ಯಕ್ತಪಡಿಸಿರುವ ಕಂದಾಯ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು, “ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಸ್ಥಾಪನೆ ಈಗಾಗಲೇ ಆರಂಭವಾಗಿದ್ದರೂ ಅಗತ್ಯ ಅನುದಾನ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿತ್ರು. ಇದರಿಂದಾಗಿ ಚಿಕಿತ್ಸೆ ಪಡೆಯಲು ಬಂದ ರೋಗಿಗಳನ್ನು ಮಂಗಳೂರು, ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳ ಆಸ್ಪತ್ರೆಗೆ ವರ್ಗಾಯಿಸುವ ಪರಿಸ್ಥಿತಿ ಎದುರಾಗಿತ್ತು. ಬಡಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದ ಈ ಸಮಸ್ಯೆ ಬಗ್ಗೆ ಸಂಸದರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದರು” ಎಂದು ತಿಳಿಸಿದ್ದಾರೆ.

 “ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನಾನು ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿ ಅವರ ಗಮನಕ್ಕೆ ತಂದೆ. ಅವರು ನಮ್ಮ ಮನವಿಗೆ ಸ್ಪಂದಿಸಿ ಈ ವಿಷಯವನ್ನು ಸಂಪುಟ ಸಭೆಯಲ್ಲಿ ಚರ್ಚೆಗೆ ತರಲು ಸೂಚಿಸಿದರು. ಅದರಂತೆ ಇಂದು ಸಚಿವ ಸಂಪುಟವು 63.34 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಿದೆ. ಶೀಘ್ರದಲ್ಲೇ ಹಾಸನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ ಸಂಪೂರ್ಣಗೊಳ್ಳಲಿದ್ದು, ಸಾರ್ವಜನಿಕ ಸೇವೆಗೆ ಒದಗಿಸಲಾಗುವುದು” ಎಂದು ತಿಳಿಸಿದ್ದಾರೆ.

ಸಚಿವ ಬೈರೇಗೌಡ ಅವರು, ಈ ಮಂಜೂರಾತಿಗೆ ಸ್ಪಂದಿಸಿದ ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುದಾನ: ಸಂಸದ ಶ್ರೇಯಸ್ ಪಟೇಲ್ ಹರ್ಷ

ಹಾಸನದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳು ಮತ್ತು ರಾಜ್ಯ ಸಚಿವ ಸಂಪುಟಕ್ಕೆ ಸಂಸದ ಶ್ರೇಯಸ್ ಪಟೇಲ್ ಕೃತಜ್ಞತೆ ಸಲ್ಲಿಸಿದ್ದಾರೆ.

ಇತ್ತೀಚೆಗೆ ಹಾಸನದಲ್ಲಿ ಸರಣಿ ಹೃದಯಾಘಾತಗಳಿಂದ ಸಾವುಗಳು ಸಂಭವಿಸಿದಾಗ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತುರ್ತು ಅವಶ್ಯಕತೆಯನ್ನು ಸಂಸದ ಶ್ರೇಯಸ್ ಮನಗಂಡು, ಈ ಬಗ್ಗೆ ಕಂದಾಯ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರು.

“ನಮ್ಮ ಮನವಿಯನ್ನು ಪುರಸ್ಕರಿಸಿ ಇಂದು ಆಸ್ಪತ್ರೆಗೆ ಹಣ ಬಿಡುಗಡೆಯಾಗಿರುವುದು ಸಂತಸ ತಂದಿದೆ” ಎಂದು ಶ್ರೇಯಸ್ ಪಟೇಲ್ ತಿಳಿಸಿದ್ದಾರೆ. ಈ ಅನುದಾನದಿಂದ ಆಸ್ಪತ್ರೆಯ ಬಾಕಿ ಉಳಿದಿರುವ ಕಾಮಗಾರಿಯು ಶೀಘ್ರವಾಗಿ ಪೂರ್ಣಗೊಳ್ಳಲಿದೆ.