ನಿರೀಕ್ಷೆ ಮೀರಿದ ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ : ಜಿಲ್ಲಾಡಳಿತಕ್ಕೂ ಸವಾಲು – ಸಚಿವ ಕೃಷ್ಣಭೈರೇಗೌಡ

The public darshan of Goddess Hasanamba entered its fifth day today. A total of 6,40,700 devotees have had darshan of the goddess from last Friday morning to 5 am today Tuesday, said District In-charge Minister Krishna Bhairegowda.

ಹಾಸನ: ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಶುಕ್ರವಾರ ಬೆಳಿಗ್ಗೆಯಿಂದ ಇಂದಿನ ಮಂಗಳವಾರ ಬೆಳಿಗ್ಗೆ 5 ಗಂಟೆಯವರೆಗೆ ಒಟ್ಟು 6,40,700 ಭಕ್ತರು ದೇವಿ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮಾತ್ರ 1,22,600 ಮಂದಿ ಭಕ್ತರು ದರ್ಶನ ಪಡೆದಿದ್ದಾರೆ. “ಐದುವರೆ ಕಿಲೋಮೀಟರ್ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದೇವೆ. ನಂತರ ಎರಡು ದಿನಗಳಲ್ಲಿ ಅದು ಏಳುಕಿಲೋಮೀಟರ್ ಆಗಿದೆ. ಆದರೂ ಜನಸಂದಣಿ ಅದನ್ನೂ ಮೀರಿ ಬಂದಿದೆ,” ಎಂದು ಸಚಿವರು ಹೇಳಿದರು.

ಸೋಮವಾರದಂದು ಜಿಲ್ಲಾಡಳಿತ 1,10,000 ಜನರನ್ನು ನಿರೀಕ್ಷಿಸಿತ್ತು, ಆದರೆ ವಾಸ್ತವವಾಗಿ 2,29,000 ಮಂದಿ ಭಕ್ತರು ದರ್ಶನ ಪಡೆದಿದ್ದಾರೆ. ನಾಳೆ ಬೆಳಿಗ್ಗೆ 5 ಗಂಟೆಯವರೆಗೆ ಇನ್ನೂ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ದರ್ಶನ ಮಾಡುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ.

“ಹಿಂದಿನ ವರ್ಷಕ್ಕಿಂತ ಈ ಬಾರಿ ಭಕ್ತರ ಸಂಖ್ಯೆ ದುಪ್ಪಟ್ಟು. ಸ್ವಚ್ಛತೆ, ಕುಡಿಯುವ ನೀರು, ಪ್ರಸಾದ ಮತ್ತು ಮಜ್ಜಿಗೆ ವ್ಯವಸ್ಥೆ ಸಮರ್ಪಕವಾಗಿ ಮಾಡಿದ್ದೇವೆ. ಇಂದು ದರ್ಶನಕ್ಕೆ ನಾಲ್ಕು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಆದ್ದರಿಂದ ಭಕ್ತರು ಮಾನಸಿಕವಾಗಿ ಸಿದ್ಧರಾಗಿ ಬರಬೇಕು,” ಎಂದು ಸಚಿವರು ಹೇಳಿದರು.

ಅವರು ಮುಂದುವರೆದು, “ಜಿಲ್ಲಾಡಳಿತ ಹಗಲು-ರಾತ್ರಿ ಶ್ರಮಿಸುತ್ತಿದೆ. ನಿನ್ನೆ ರಾತ್ರಿ 3ರಿಂದ 5 ಗಂಟೆಯವರೆಗೆ ಅರ್ಚಕರ ಸಹಕಾರದಿಂದ ಗರ್ಭಗುಡಿ ಬಾಗಿಲು ಮುಚ್ಚದೆ ದರ್ಶನ ಕಲ್ಪಿಸಿದ್ದೇವೆ. ಜನರು ಸಂತೋಷದಿಂದ ದೇವಿಯ ದರ್ಶನ ಪಡೆಯುತ್ತಿದ್ದಾರೆ,” ಎಂದರು.

ಈ ವರ್ಷ ದೇವಾಲಯದ ವಿಶೇಷ ದರ್ಶನ ಮತ್ತು ಪ್ರಸಾದ ಮಾರಾಟದಿಂದ ಈಗಾಗಲೇ ₹4,21,73,760 ರೂ. ಆದಾಯ ಬಂದಿದೆ. ಕಳೆದ ವರ್ಷಕ್ಕಿಂತ ಇದು ಒಂದು ಕೋಟಿ ಹೆಚ್ಚಾಗಿದೆ ಎಂದು ಸಚಿವರು ಹೇಳಿದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ₹1000 ದರ್ಶನದ 3,600 ಟಿಕೆಟ್‌ಗಳು ಮತ್ತು ₹300 ದರ್ಶನದ 6,000 ಟಿಕೆಟ್‌ಗಳು ಮಾರಾಟವಾಗಿವೆ. “ಆದಾಯಕ್ಕಿಂತ ಜನರಿಗೆ ಶೀಘ್ರ ದರ್ಶನ ಕಲ್ಪಿಸುವುದೇ ನಮ್ಮ ಆದ್ಯತೆ,” ಎಂದು ಸಚಿವರು ಸ್ಪಷ್ಟಪಡಿಸಿದರು.

ಮಾಜಿ ಸಚಿವ ಎಚ್.ಡಿ. ರೇವಣ್ಣ ದೇವಾಲಯಕ್ಕೆ ಆಗಮಿಸಿದ ಕುರಿತು ಮಾತನಾಡುತ್ತ, “ಅವರಿಗೆ ಹಾಸನಾಂಬೆಯ ಮೇಲಿನ ವಿಶೇಷ ಭಾವನೆ ಇದೆ. ಅವರು ಬಂದು ಪೂಜೆ ಮಾಡಿಕೊಂಡು ಹೋಗಿದ್ದಾರೆ. ಅದು ಅವರ ಧರ್ಮ. ನಾನು ಅದನ್ನು ದೊಡ್ಡ ವಿಷಯ ಮಾಡಲ್ಲ,” ಎಂದರು.

ಹಾಸನಾಂಬೆಯ ದರ್ಶನಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಮುಂದಿನ ಎಂಟು ದಿನಗಳಿಗೆ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ.