ಅರಸೀಕೆರೆ: ಎನ್‌ಪಿಎಸ್ ರದ್ದು–ಓಪಿಎಸ್ ಜಾರಿಗೆ ಒತ್ತಾಯ ರಾಜ್ಯಮಟ್ಟದ ಸಮಾವೇಶಕ್ಕೆ ತೆರಳುವ ಮುನ್ನ ಮಾಡಾಳು ಸ್ವರ್ಣಗೌರಮ್ಮ ದರ್ಶನ

ಅರಸೀಕೆರೆ:ದಾವಣಗೆರೆ ನಗರದಲ್ಲಿ ಭಾನುವಾರ ನಡೆಯುತ್ತಿರುವ ಎನ್‌ಪಿಎಸ್ ರದ್ದುಪಡಿಸಿ ಓಪಿಎಸ್ ಜಾರಿಗೊಳಿಸಬೇಕು ಎಂಬ ಒತ್ತಾಯದೊಂದಿಗೆ ಆಯೋಜಿಸಲಾದ 2ನೇ ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸಲು ತೆರಳುತ್ತಿದ್ದ ಹಾಸನ ಜಿಲ್ಲಾ ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘ ಹಾಗೂ ಅರಸೀಕೆರೆ ತಾಲೂಕು ಎನ್‌ಪಿಎಸ್ ನೌಕರರ ಸಂಘದ ಪದಾಧಿಕಾರಿಗಳು, ಮಾರ್ಗಮಧ್ಯೆ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣಗೌರಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ನಂತರ ದೇವಾಲಯದ ಮುಂಭಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅರಸೀಕೆರೆ ತಾಲೂಕು ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಚೇತನ್ ಎಂ.ಎನ್. (ಮದ್ದರಹಳ್ಳಿ), ರಾಜ್ಯ ಸರ್ಕಾರ ಕೂಡಲೇ ಎನ್‌ಪಿಎಸ್ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ (ಓಪಿಎಸ್) ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಎನ್‌ಪಿಎಸ್ ವ್ಯವಸ್ಥೆಯಿಂದ ನೌಕರರ ಭವಿಷ್ಯ ಅಸ್ಥಿರವಾಗುತ್ತಿದ್ದು, ನಿವೃತ್ತಿ ನಂತರದ ಭದ್ರತೆಗಾಗಿ ಓಪಿಎಸ್ ಅವಶ್ಯಕವಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಅನಂತ್ ಕುಮಾರ್, ಉಪಾಧ್ಯಕ್ಷರುಗಳಾದ ಶ್ರೀನಿವಾಸ್ ಅಂಚರ, ಅಹಮದ್, ಕಾರ್ಯದರ್ಶಿ ಮಹೇಶ್, ಅರಸೀಕೆರೆ ತಾಲೂಕು ಎನ್‌ಪಿಎಸ್ ನೌಕರರ ಸಂಘದ ಕಾರ್ಯದರ್ಶಿ ಶಿವಕುಮಾರ್, ಗೌರವಾಧ್ಯಕ್ಷ ರಾಮಕೃಷ್ಣ, ರಾಜ್ಯ ಸರ್ಕಾರಿ ನೌಕರರ ಅರಸೀಕೆರೆ ಘಟಕದ ಪ್ರಧಾನ ಕಾರ್ಯದರ್ಶಿ ಕೃಷ್ಣ ಸೇರಿದಂತೆ ನೌಕರರ ಸಂಘದ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.