ಹಾಸನ: ಜವಾಬ್ದಾರಿ ಹಾಗೂ ಜೀವನೋತ್ಸಾಹ ಹಾಗೂ ನಾಯಕತ್ವ ತುಂಬುವುದೇ ಸ್ಕೌಟ್ಸ್ ಗೈಡ್ಸ್ ಧ್ಯೇಯ .
ಸೇವೆ ಮತ್ತು ಪ್ರಾಯೋಗಿಕ ಚಟುವಟಿಕೆಯ ಮೂಲಕ ಕಲಿಕೆಯನ್ನು ಸದೃಢಗೊಳಿಸುತ್ತಾ ಜೀವನೋತ್ಸಾಹ ತುಂಬುವಂತಹ ಸ್ಕೌಟ್ಸ್ ಗೈಡ್ಸ್ ಘಟಕಗಳನ್ನು ಶಾಲೆಯಲ್ಲಿ ತೆರೆಯುವುದು ಶಾಲೆಗೆ ಹೆಮ್ಮೆ ಎಂದು ವಿದ್ಯಾಸೌಧ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ‘ಪರಮೇಶ್ ಹಲಗೇರಿ’- ಅವರು ಅಭಿಪ್ರಾಯ ಪಟ್ಟರು.
ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಹಾಸನ ವತಿಯಿಂದ ವಿಜಯನಗರ ಬಡಾವಣೆಯಲ್ಲಿರುವ ವಿದ್ಯಾಸೌಧ ಪಬ್ಲಿಕ್ ಶಾಲೆಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ನೂತನ ಘಟಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಾ ಸ್ಕೌಟ್ಸ್ ಮತ್ತು ಗೈಡ್ಸ್ ನ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಸಂಘಟನಾ ಆಯುಕ್ತರಾದ ಪ್ರಿಯಾಂಕ ಹೆಚ್ಎಂ ಅವರು ವಿವಿಧ ವಯೋಮಾನದಲ್ಲಿ ಮಕ್ಕಳು ಭಾಗವಹಿಸಬಹುದಾದಂತಹ ವಿಭಾಗಗಳಾದ ಕಬ್ಸ- ಬುಲ್ಬುಲ್ಸ, ಸ್ಕೌಟ್ಸ್- ಗೈಡ್ಸ್, ರೋವರ್ಸ್ -ರೇಜರ್ಸ ಬಗ್ಗೆ ವಿವರವಾಗಿ ಪರಿಚಯಿಸಿದರು.
ನಿಕಟ ಪೂರ್ವ ಜಂಟಿ ಕಾರ್ಯದರ್ಶಿ ಕಾಂಚನಮಾಲ ಅವರು ಸ್ಕೌಟಿಂಗ್ ಇತಿಹಾಸವನ್ನು ಪರಿಚಯಿಸಿದರು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಬಿಎಸ್ ವನಜಾಕ್ಷಿ ಅವರು ಸೈನ್ಯಾಧಿಕಾರಿಯಾಗಿದ್ದ ಲಾರ್ಡ್ ಸ್ಟೀಫನ್ ಸನ್ ಸ್ಮಿತ್ ಬೇಡನ್ ಪೊವೆಲ್ ರವರು ಯುವ ಶಕ್ತಿಯ ಸದ್ಬಳಕೆಗಾಗಿ ಈ ಒಂದು ಜಾಗತಿಕ ಸಂಸ್ಥೆಯನ್ನ ಸ್ಥಾಪಿಸಿದರು.
ಇದು ಜಗತ್ತಿನ ಸುಮಾರು 216ಕ್ಕೂ ಹೆಚ್ಚು ದೇಶಗಳಲ್ಲಿ ಚಾಲ್ತಿಯಲ್ಲಿದೆ. ಸ್ವಯಂ ಶಿಸ್ತು, ಸೇವೆ , ಜವಾಬ್ದಾರಿ ನಿರ್ವಹಣೆ ಹಾಗೂ ನಾಯಕತ್ವ ಬೆಳವಣಿಗೆ, ಸ್ಕೌಟಿಂಗ್ ನಿಂದ ಜಾಗೃತವಾಗಿ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ಇಲ್ಲಿ ವಿವಿಧ ಹಂತದ ಪರೀಕ್ಷೆಗಳಿದ್ದು ರಾಜ್ಯ ಪುರಸ್ಕಾರ ರಾಷ್ಟ್ರಪತಿ ಪುರಸ್ಕಾರಗಳಂತಹ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದರಿಂದ ಉನ್ನತ ಶಿಕ್ಷಣಕ್ಕೂ ಮೀಸಲಾತಿ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ನೂತನವಾಗಿ ಶಾಲೆಯಲ್ಲಿ ಘಟಕ ಸ್ಥಾಪಿಸಿ ಪಠ್ಯೇತರ ಚಟುವಟಿಕೆಯ ಮೂಲಕ ಮಕ್ಕಳಲ್ಲಿರುವ ಕೌಶಲವನ್ನು ಪತ್ತೆ ಹಚ್ಚಿ , ವಿದ್ಯಾರ್ಥಿಗಳನ್ನು ಕ್ರಿಯಾಶೀಲವಾಗಿಡುವ ನಿಟ್ಟಿನಲ್ಲಿ ಶಾಲೆ ಪ್ರಯತ್ನಿಸಿರುವುದು ಅಭಿನಂದನಾ ಅರ್ಹ, ನಗರದ ಅತ್ಯುತ್ತಮ ಸ್ಕೌಟ್ಸ್ ಮತ್ತೆ ಗೈಡ್ ಘಟಕ ನಿಮ್ಮದಾಗಲಿ ಅದಕ್ಕೆ ಬೇಕಾಗುವ ಎಲ್ಲಾ ನೆರವನ್ನು ಸ್ಥಳೀಯ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆ ನಿಮಗೆ ನೀಡುತ್ತದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾಸೌಧ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲರಾದ ಮೋಹನ್ ಕುಮಾರ್, ಕೋ ಆರ್ಡಿನೇಟರ್ ನಾಜಿಯಾ ವಿದ್ಯಾಸೌಧ ಕಿಡ್ಸ್ ವಿಭಾಗದ ಪೂರ್ಣಿಮಾ ಡಿ ಟಿ ಹಾಗೂ ವಿದ್ಯಾಸೌಧ ಶಾಲೆಯ ಶಿಕ್ಷಕರು, ಹಾಗೂ ಗೈಡ್ ಶಿಕ್ಷಕಿಯಾದ ಶ್ರೀ ಉಪಸ್ಥಿತರಿದ್ದರು . ಶಿಕ್ಷಕರಾದ ಪೂಜಾ ಕಾರ್ಯಕ್ರಮವನ್ನು ನಿರೂಪಿಸಿದರೆ ನಿಶಾಂತ್ ಸ್ವಾಗತಿಸಿ ಚಂದನ್ ಚರ್ಚಿಲ್ ರವರು ಎಲ್ಲರನ್ನೂ ವಂದಿಸಿದರು.










