ಹಾಸನ : ರಾಜ್ಯದ ವಿವಿಧೆಡೆ ಪಹಣಿಯಲ್ಲಿ ವಕ್‌್ಫ ಹೆಸರು ನಮೂದಾಗಿರುವುದು ವಿವಾದ ಸೃಷ್ಟಿಸಿದ್ದು ಜಿಲ್ಲೆಯಲ್ಲೂ ವಕ್‌್ಫ ಹೆಸರಿಗೆ ಶಾಲೆ ಜಾಗ ಹಸ್ತಾಂತರವಾಗಿರುವುದು ಬೆಳಕಿಗೆ ಬಂದಿದೆ.
ಬೇಲೂರು ತಾಲ್ಲೂಕು ಹಳೇಬೀಡು ಹೋಬಳಿ ಘಟ್ಟದಹಳ್ಳಿಯ ಶಾಲೆ ಪಹಣಿಯಲ್ಲಿ ವಕ್‌್ಫ ಹೆಸರು ಸೇರಿರುವುದು ಶಾಕ್ ನೀಡಿದೆ.

ವಿಜಯಪುರ, ಯಾದಗಿರಿ, ಬೀದರ್, ಮಂಡ್ಯ, ಕೋಲಾರ ಜಿಲ್ಲೆಗಳು ಮಾತ್ರವಲ್ಲದೆ ಹಾಸನದಲ್ಲೂ ಪ್ರಕರಣ ಬೆಳಕಿಗೆ ಬಂದಿದ್ದು ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳೇಬೀಡಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭೂದಾನ ಮಾಡಿದ ಶಾಲೆಯ ಆಸ್ತಿಯ ಪಹಣಿಯಲ್ಲಿ ವಕ್‌್ಫ ಆಸ್ತಿ ಎಂದು ನಮೂದಾಗಿದ್ದು, ರಾಜ್ಯ ಸರ್ಕಾರವೇ ಇದಕ್ಕೆ ನೇರ ಹೊಣೆ. ಸರ್ಕಾರಿ ಜಾಗ, ಬಡವರ ಜಮೀನುಗಳು ತಾವಾಗಿಯೇ ವಕ್‌್ಫಗೆ ಸೇರುತ್ತವೆಯೇ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ವಕ್‌್ಫ ಸಚಿವ ಜಮೀರ್ ಅಹದ್ ಖಾನ್ ಅವರ ಕೈವಾಡವಿದೆ. ರಾಜ್ಯ ಸರ್ಕಾರದ ವಿರುದ್ಧ ಬೇಲೂರು ತಾಲ್ಲೂಕು ಕಚೇರಿ ಎದುರು ಬುಧವಾರ ರೈತರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಎಲ್ಲಾ ಅವಾಂತರಗಳಿಗೂ ನೀವೇ ಕಾರಣ. ಒಂದು ಸಮುದಾಯವನ್ನು ಓಲೈಸಲು ಈ ರೀತಿಯ ಕೆಟ್ಟ ರಾಜಕಾರಣ ಮಾಡುತ್ತಿದ್ದೀರಿ. ರೈತರು, ಮಠಮಾನ್ಯ, ಶಾಲೆಗಳ ಜಮೀನು ವಕ್‌್ಫಗೆ ಸೇರುವುದು ಯಾವ ನ್ಯಾಯ. ಶಾಲೆಗೆ ದಾನ ನೀಡಿರುವ ಜಮೀನನ್ನು ಬಿಡದಷ್ಟು ಕ್ರೂರ ಮನಸ್ಥಿತಿಯ ಸರ್ಕಾರ ಇದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಏನಿದು ಪ್ರಕರಣ?:
ಘಟದಹಳ್ಳಿ ಗ್ರಾಮದ ಸರ್ವೆ ನಂಬರ್ 435ರ ಪಹಣಿಯಲ್ಲಿ 38 ಗುಂಟೆ ಭೂದಾನ ಶಾಲೆಗೆ ಎಂದಿದ್ದು ಆದರೆ ಇತ್ತೀಚಿಗೆ ಶಾಲೆ ಹಾಗು ಶಾಲೆಯ ಜಾಗ ಪಹಣಿಯಲ್ಲಿ ವೋಟ್ ಆಸ್ತಿ ಎಂದು ನಮೂದಾಗಿದೆ. ಶಾಲೆಗಾಗಿ ಮೀಸಲಿಟ್ಟ ಸ್ಥಳವನ್ನೇ ವಕ್‌್ಫ ಆಸ್ತಿ ಎಂದು ಬದಲಾವಣೆಯಾಗಿದ್ದು ಇನ್ನು ಸಾಮಾನ್ಯ ರೈತರ ಆಸ್ತಿ ಏನಾಗಿರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಪಹಣಿ ಪರೀಕ್ಷಿಸಿಕೊಳ್ಳಿ:
ಈಗಾಗಲೇ ಸರ್ಕಾರ ರೈತರ ಜಮೀನನ್ನು ವಕ್‌್ಫಗೆ ಬರೆದು ಕೊಡಲು ಹುನ್ನಾರ ನಡೆಸುತ್ತಿದ್ದು ತಾಲ್ಲೂಕಿನ ರೈತರು ವಿಳಂಬ ಮಾಡದೆ ತಮ ಜಮೀನಿನ ಪಹಣಿಯನ್ನು ಪರೀಕ್ಷಿಸಬೇಕು. ಪಹಣಿಯಲ್ಲಿ ವ್ಯತ್ಯಾಸವಾಗಿದ್ದರೆ ನಮ ಗಮನಕ್ಕೆ ತರಬೇಕು. ಯಾವ ಕಾರಣಕ್ಕೂ ಅನ್ನದಾತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.
ನೋಟಿಫಿಕೇಶನ್ ತೆಗೆದುಹಾಕಿ:
ಕೇವಲ ಉಪಚುನಾವಣೆಯ ಕಾರಣದಿಂದ ರೈತರಿಗೆ ನೀಡಿದ ನೋಟೀಸ್ ಸರ್ಕಾರ ವಾಪಸ್ ಪಡೆದಿದೆ ಅಷ್ಟೇ. ಇದು ರೈತರ ಕಣ್ಣೊರೆಸುವ ತಂತ್ರವಾಗಿದ್ದು ಸಚಿವ ಜಮೀರ್ ಅಹದ್ ಖಾನ್ ಈ ರೀತಿಯ ನಾಟಕವಾಡುವುದನ್ನು ಬಿಟ್ಟು ಗೆಜೆಟ್ ನೋಟಿಫಿಕೇಶನ್ ಅನ್ನು ತೆಗೆದು ಹಾಕಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿಂದುಗಳಿಗೆ ಭದ್ರತೆ ಇಲ್ಲ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಇಂತಹ ಲಜ್ಜೆಗೆಟ್ಟ ಸರ್ಕಾರವನ್ನು ನಾನು ನೋಡಿಲ್ಲ. ಒಂದು ಕೋಮಿನ ಓಲೈಕೆಗಾಗಿ ಈ ಎಲ್ಲಾ ಕಸರತ್ತು ಮಾಡುತ್ತಿದೆ. ಇದರಿಂದ ಹಿಂದೆ ದೊಡ್ಡ ಹುನ್ನಾರವೇ ಅಡಗಿದೆ. ರಾಜ್ಯದಲ್ಲಿ ಹಿಂದುಗಳಿಗೆ ಭದ್ರತೆ ಇಲ್ಲವಾಗಿದೆ ಎಂದು ಗುಡುಗಿದರು.
ಬೇಲೂರು ತಾಲ್ಲೂಕು ವೀರಶೈವ ಯುವ ಘಟಕದ ಅಧ್ಯಕ್ಷ ಚೇತನ್, ಮುಖಂಡರಾದ ವಿನಯ್, ರಂಜಿತ್ ದಾಸ್, ರಘುನಾಥ್, ಪ್ರಸನ್ನ ಕುಮಾರ್, ಕೃಷ್ಣ ಇತರರಿದ್ದರು.










