ಅರಕಲಗೂಡು: ಲೋಕ ಅದಾಲತ್‌ನಲ್ಲಿ ವಿಚ್ಛೇದನ ಕೋರಿ ಬಂದ ದಂಪತಿ ಮತ್ತೆ ಒಂದಾದರು

The incident took place on Saturday at the town court where a couple who had filed a petition for divorce were reunited in Lok Adalat.

ಅರಕಲಗೂಡು: ವೈವಾಹಿಕ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ಲೋಕ ಅದಾಲತ್‌ನಲ್ಲಿ ಮತ್ತೆ ಒಂದಾದ ಘಟನೆ ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆಯಿತು.

ತಾಲ್ಲೂಕಿನ ಸೋಂಪುರ ಗ್ರಾಮದ ಸಿ. ಜ್ಯೋತಿ ಮತ್ತು ಸಾಲಿಗ್ರಾಮ ತಾಲ್ಲೂಕಿನ ದಿಡ್ಡಹಳ್ಳಿ ಗ್ರಾಮದ ಡಿ. ಯೋಗೇಶ್ ದಂಪತಿ ದಾಂಪತ್ಯ ಜೀವನದಲ್ಲಿನ ಭಿನ್ನಾಭಿಪ್ರಾಯದಿಂದ ಮೂರು ವರ್ಷಗಳ ಹಿಂದೆ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಕೆ. ನಾಗೇಶ್ ಮೂರ್ತಿ ಅವರು ದಂಪತಿಗೆ ತಿಳುವಳಿಕೆ ನೀಡಿ ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗುವಂತೆ ಮಾಡಿದರು.

ನಂತರ ದಂಪತಿ ಪರಸ್ಪರ ಹಾರ ಬದಲಿಸಿಕೊಂಡು ಸಂತೋಷ ವ್ಯಕ್ತಪಡಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಯಾಧೀಶ ಬಿ.ಕೆ. ನಾಗೇಶ್ ಮೂರ್ತಿ, “ದಂಪತಿಗಳಲ್ಲಿ ಸಾಮರಸ್ಯ ಮುಖ್ಯ. ಕುಟುಂಬ ಚೆನ್ನಾಗಿದ್ದರೆ ಸಮಾಜವೂ ಸುಭದ್ರವಾಗಿರುತ್ತದೆ. ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿರುವ ಇತರ ದಂಪತಿಗಳಿಗೆ ಈ ಪ್ರಕರಣ ಅನುಕರಣೀಯವಾಗಬೇಕು,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಕೀಲರಾದ ಪಿ.ಎಸ್. ಗುರುಪ್ರಸಾದ್, ಎ.ಎಸ್. ಮಧು, ಕಿರಣ್ ಕುಮಾರ್, ಶಂಕರಯ್ಯ, ಗಣೇಶ್ ಶೆಟ್ಟಿ, ಬಿ.ಎಂ. ಮಹೇಶ್, ಪ್ರಶಾಂತ್ ಉಪಸ್ಥಿತರಿದ್ದರು.

235 ಪ್ರಕರಣ ಇತ್ಯರ್ಥ:
ಪಟ್ಟಣದ ನಾಲ್ಕು ನ್ಯಾಯಾಲಯಗಳಲ್ಲಿ ಒಟ್ಟು 9,157 ಪ್ರಕರಣಗಳು ಬಾಕಿ ಇದ್ದು, ಶನಿವಾರ ನಡೆದ ಲೋಕ ಅದಾಲತ್ ಮುಂದೆ 549 ಪ್ರಕರಣಗಳನ್ನು ಇಡಲಾಗಿತ್ತು. ಅವುಗಳಲ್ಲಿ 235 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.

The incident took place on Saturday at the town court where a couple who had filed a petition for divorce were reunited in Lok Adalat.