ಚನ್ನರಾಯಪಟ್ಟಣ: ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಸ್ಥಾಪಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಉದ್ಘಾಟನೆಯನ್ನು ಫೆಬ್ರುವರಿ ಕೊನೆ, ಇಲ್ಲವೇ ಮಾರ್ಚ್ ಆರಂಭದಲ್ಲಿ ನಡೆಸಲಾಗುವುದು, ದಿನಾಂಕ ನಿಗದಿಯನ್ನು ಜಿಲ್ಲಾ ಮಂತ್ರಿಗಳು, ಸ್ಥಳೀಯ ಶಾಸಕರು ಸೇರಿ ಗೊತ್ತುಪಡಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.
ಕಾರ್ಯಕ್ರಮದ ಸಲುವಾಗಿ ಹೊಳೆನರಸೀಪುರಕ್ಕೆ ತೆರಳುವ ಮಾರ್ಗ ಮಧ್ಯೆ ಮಿನಿ ವಿಧಾನಸೌಧದೆದುರು ನಿರ್ಮಿಸಲಾಗಿರುವ ಅಂಬೇಡ್ಕರ್ ಪ್ರತಿಮೆಯನ್ನ ವೀಕ್ಷಿಸಿ ಮಾತನಾಡಿದ ಅವರು, ಪ್ರತಿಮೆ ಅನಾವರಣಕ್ಕೆ ಜನವರಿ 26ರ ದಿನಾಂಕ ನಿಗದಿಯಾಗಿ ಉದ್ಘಾಟನೆಗೆ ತಾನು ಬರುವುದಾಗಿ ಹೇಳಿದ್ದೆ, ದಲಿತ ಮುಖಂಡರು ಮತ್ತು ಮಾಜಿ ಎಂಎಲ್‌ಸಿ ಗೋಪಾಲಸ್ವಾಮಿಯವರು ನನ್ನ ಬಳಿ ಬಂದು ಗಣರಾಜ್ಯೋತ್ಸವ ದಿನದಂದು ತಮಗೆ ಹೆಚ್ಚು ಕಾರ್ಯಕ್ರಮಗಳಿರುತ್ತವೆ. ಸೂಕ್ತ ಸಮಯಕ್ಕೆ ಬರಲಾಗದು ಆದ್ದರಿಂದ ಉದ್ಘಾಟನೆಯನ್ನು ಮುಂದೂಡುವಂತೆ ಮನವಿ ಮಾಡಿದ್ದರು ಎಂದರು.
ಆಗ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಉದ್ಘಾಟನೆಯನ್ನು ಮುಂದೂಡುವಂತೆ ಸೂಚಿಸಿದ್ದೆ. ಇದೀಗ ಜಿಲ್ಲಾ ಮಂತ್ರಿಗಳು ಸ್ಥಳೀಯ ಶಾಸಕರು ಮತ್ತು ವಿಧಾನಪರಿಷತ್ತು ಸದಸ್ಯರು ಸೇರಿ ದಿನಾಂಕ ನಿಗದಿಗೊಳಿಸುತ್ತಾರೆ. ಏಪ್ರಿಲ್ 14ರ ಅಂಬೇಡ್ಕರ್ ಜಯಂತಿಯೊಳಗೆ ಪ್ರತಿಮೆ ಉದ್ಘಾಟನೆಯಾಗುತ್ತದೆ ಎಂದರು.
ಫೆಬ್ರುವರಿ ಕೊನೆ ವಾರ, ಇಲ್ಲವೇ ಮಾರ್ಚ್ ಆರಂಭದಲ್ಲಿ ದಿನಾಂಕ ನಿಗದಿಗೊಳಿಸಲಾಗುವುದು, ಸಮಾರಂಭಕ್ಕೆ ತಾವು ಬರುವುದಾಗಿ ಮತ್ತು ಎಲ್ಲ ಪಕ್ಷದವರು ಸಮಾರಂಭದಲ್ಲಿ ಪಾಲ್ಗೊಳುವ ಮೂಲಕ ಪ್ರತಿಮೆ ಉದ್ಘಾಟನೆಯನ್ನು ಅದ್ದೂರಿಯಾಗಿಸೋಣ ಎಂದರು.
ಪ್ರತಿಮೆಗೆ ಮಾಲಾರ್ಪಣೆ ಮಾಡಲು ಸುತ್ತಲೂ ನಿರ್ಮಾಣ ಮಾಡಲಾಗಿರುವ ಗ್ರಿಲ್‌ನಿಂದಾಗಿ ಅಂಬೇಡ್ಕರ್‌ರವರ ಮುಖದ ಭಾಗ ಸರಿಯಾಗಿ ಕಾಣುವುದಿಲ್ಲ, ಆದ್ದರಿಂದ ಅಡ್ಡವಾಗಿರುವ ಒಂದು ಕಂಬಿಯನ್ನು ತೆರವು ಮಾಡುವಂತೆ ಅಧಿಕಾರಿಗಳಿಗೆ ಈ ವೇಳೆ ತಿಳಿಸಿದರು.
ವಿಧಾನಪರಿಷತ್ತು ಸದಸ್ಯ ಎಂ.ಎ.ಗೋಪಾಲಸ್ವಾಮಿ, ಬ್ಲಾಕ್ ಅಧ್ಯಕ್ಷ ಎಂ.ಕೆ.ಮಂಜೇಗೌಡ, ಭೀಮ್ ಅರ್ಮಿ ಜಿಲ್ಲಾಧ್ಯಕ್ಷ ಪ್ರಸನ್ನ, ಮುಖಂಡರಾದ ನಾಗೇಶ್, ಧರ್ಮಯ್ಯ, ಪ್ರೇಮ್‌ಕುಮಾರ್, ಉಮಾಶಂಕರ್, ದೊರೆ, ಜಬೀವುಲ್ಲಾ ಬೇಗ್, ರವಿ, ಮಹೇಶ್ ಕಬ್ಬಾಳು ಸೇರಿ ತಹಶೀಲ್ದಾರ್ ಶಂಕರಪ್ಪ, ಸಮಾಜ ಕಲ್ಯಾಣಾಧಿಕಾರಿ ತ್ಯಾಗರಾಜ್ ಸೇರಿ ಇತರರಿದ್ದರು.
The inauguration of the Dr. B.R. Ambedkar statue installed in front of the town’s taluk office will be held in late February or early March.










