ಸಕಲೇಶಪುರದಲ್ಲಿ ಏಳು ಕೇಂದ್ರಗಳಲ್ಲಿ ಹಿಂದೂ ಸಮಾಜೋತ್ಸವ: ಅಧ್ಯಕ್ಷ ಲೋಹಿತ್ ಜಂಬರಡಿ

The Hindu Samajotsava Organizing Committee has organized a Hindu Samajotsava program at seven centers in Sakleshpur Taluk with the aim of showcasing the strength of the Hindu community and effectively addressing the challenges facing the community.

ಸಕಲೇಶಪುರ: ತಾಲ್ಲೂಕಿನಲ್ಲಿ ಹಿಂದೂ ಸಮಾಜದ ಶಕ್ತಿ ಪ್ರದರ್ಶನ ಹಾಗೂ ಸಮಾಜ ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯ ವತಿಯಿಂದ ಏಳು ಕೇಂದ್ರಗಳಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಲೋಹಿತ್ ಜಂಬರಡಿ ಹೇಳಿದರು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಪರಿವಾರ ಸಂಘಟನೆಗಳು ಕಳೆದ 100 ವರ್ಷಗಳಿಂದ ದೇಶದಾದ್ಯಂತ ಸಮಾಜ ನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಂಡಿವೆ. ಪ್ರಸ್ತುತ ಸಂಘದ ಶತಮಾನೋತ್ಸವ ಕಾರ್ಯಕ್ರಮಗಳು ಇಡೀ ದೇಶದಲ್ಲಿ ನಡೆಯುತ್ತಿದ್ದು, ಸಂಘಕ್ಕೆ ಶಕ್ತಿ ತುಂಬುವ ಹಾಗೂ ಸಮಾಜ ನೈತಿಕವಾಗಿ ಸಂಘದ ಜೊತೆಯಲ್ಲಿದೆ ಎಂಬ ಸಂದೇಶ ನೀಡುವ ಉದ್ದೇಶದಿಂದ ಹಿಂದೂ ಸಮಾಜೋತ್ಸವವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಈ ಬಾರಿ ನಗರ ಕೇಂದ್ರಿತ ಕಾರ್ಯಕ್ರಮಗಳ ಬದಲಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸುವ ನಿಟ್ಟಿನಲ್ಲಿ ಎರಡರಿಂದ ಮೂರು ಪಂಚಾಯಿತಿಗಳನ್ನು ಒಟ್ಟುಗೂಡಿಸಿ ಸಮಾಜೋತ್ಸವ ನಡೆಸಲಾಗುವುದು. ಇದರಿಂದ ಸಂಘದ ವಿಚಾರಗಳು ಪ್ರತಿಯೊಬ್ಬರಿಗೂ ತಲುಪಲಿದ್ದು, ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳು ಮನೆಮನೆಗೂ ತಲುಪುವಂತಾಗಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರತಿಯೊಂದು ಕೇಂದ್ರದಲ್ಲೂ 20ರಿಂದ 30 ಸದಸ್ಯರ ಸ್ಥಳೀಯ ಸಮಿತಿಗಳನ್ನು ರಚಿಸಲಾಗಿದ್ದು, ಪ್ರತಿ ಮನೆಗೂ ನೇರ ಸಂಪರ್ಕ ಸಾಧಿಸುವ ಕಾರ್ಯ ಆರಂಭಿಸಲಾಗಿದೆ ಎಂದು ತಿಳಿಸಿದರು.

ಬಾಳ್ಳುಪೇಟೆ–ಕುನಿಗನಹಳ್ಳಿ ಪಂಚಾಯಿತಿಗಳನ್ನು ಸೇರಿಸಿ ಬಾಳ್ಳುಪೇಟೆಯಲ್ಲಿ ಕಾರ್ಯಕ್ರಮ, ಬಿರಡಹಳ್ಳಿ–ಉದಯವಾರ–ಹಲಸುಲಿಗೆ ಪಂಚಾಯಿತಿಗಳನ್ನು ಸೇರಿಸಿ ಬಿರಡಹಳ್ಳಿಯಲ್ಲಿ ಕಾರ್ಯಕ್ರಮ, ದೇವಾಲದಕೆರೆ–ಹಾನುಬಾಳ್ ಗ್ರಾ.ಪಂಗಳನ್ನು ಸೇರಿಸಿ ಹಾನುಬಾಳ್ನಲ್ಲಿ ಕಾರ್ಯಕ್ರಮ, ಹೆಬ್ಬಸಾಲೆ–ಕ್ಯಾಮನಹಳ್ಳಿ, ಗ್ರಾ.ಪಂ ಸೇರಿಸಿ ಕ್ಯಾಮನಹಳ್ಳಿಯಲ್ಲಿ ಕಾರ್ಯಕ್ರಮ, ಬ್ಯಾಕರವಳ್ಳಿ ಕ್ಯಾನಹಳ್ಳಿ ಗ್ರಾ.ಪಂಗಳು ಸೇರಿ ಕ್ಯಾನಹಳ್ಳಿಯಲ್ಲಿ ಕಾರ್ಯಕ್ರಮ, ಬಾಗೆ ಹಾಗೂ ಬೆಳಗೋಡು ಗ್ರಾ.ಪಂ ಸೇರಿಸಿ ಬಾಗೆಯಲ್ಲಿ ಕಾರ್ಯಕ್ರಮ, ಸಕಲೇಶಪುರ ನಗರ, ಮಳಲಿ ಗ್ರಾ.ಪಂ, ಆನೆಮಹಲ್,ಗ್ರಾ.ಪಂ ಹಾಗೂ ಹೆಗ್ಗದ್ದೆ ಗ್ರಾ.ಪಂ ಸೇರಿಸಿ ಜನವರಿ 28 ರಂದು ಸಕಲೇಶಪುರ ಪಟ್ಟಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಉಳಿದ ಕೇಂದ್ರಗಳ ದಿನಾಂಕ ಮತ್ತು ಸ್ಥಳವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದರು.

ತಾಲ್ಲೂಕಿನ ಎಲ್ಲಾ ಹಿಂದೂಗಳು ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಿಂದೂ ಸಮಾಜೋತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ಸಂಯೋಜಕ ವಿಷ್ಣು ಮಾತನಾಡಿ, ಹಿಂದೂ ಸಮಾಜೋತ್ಸವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ರಚಿಸಲಾಗಿದ್ದು ಅಧ್ಯಕ್ಷರಾಗಿ ಲೋಹಿತ್, ಉಪಾಧ್ಯಕ್ಷರಾಗಿ ಮೇಘನ, ಕಾರ್ಯದರ್ಶಿಯಾಗಿ ಅಶ್ವಥ್ ವಳಲಹಳ್ಳಿ ಹಾಗೂ ರಮೇಶ್ ಟೈಲ್ಸ್, ಕೋಶಾಧಿಕಾರಿಯಾಗಿ ಸ್ಟುಡಿಯೋ ರಘುರವರನ್ನು ನೇಮಕ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದೇವಾಲದಕೆರೆ ಮೇಘನಾ, ಸ್ಟುಡಿಯೋ ರಘು ಉಪಸ್ಥಿತರಿದ್ದರು.

The Hindu Samajotsava Organizing Committee has organized a Hindu Samajotsava program at seven centers in Sakleshpur Taluk with the aim of showcasing the strength of the Hindu community and effectively addressing the challenges facing the community.