ಚನ್ನರಾಯಪಟ್ಟಣ: ದ್ರವರೂಪದ ಯೂರೀಯಾ ಬಳಕೆಯಿಂದ ಇಳುವರಿ ಹೆಚ್ಚು, ಭೂಮಿ ಆರೋಗ್ಯ. ಎಡಿಎ ಎಂ.ಮೋಹನ್‌ಕುಮಾರ್

ಚನ್ನರಾಯಪಟ್ಟಣ: ಬೆಳೆಗಳಿಗೆ ಹೆಚ್ಚಿನ ಯೂರಿಯಾ ಹಾಕಿ ಜಮೀನಿನ ಫಲವತ್ತತೆ ಕಡಿಮೆಯಾಗಿದೆ. ಯೂರಿಯಾ ನೀರಿಗೆ ಸೇರಿ ಜಲ ಕಲುಷಿತವಾಗುತ್ತಿದೆ. ಯೂರಿಯಾದ ಅಧಿಕ ಬಳಕೆಯಿಂದ ಇಂತಹ ಪರಿಣಾಮಗಳು ಆಗುತ್ತಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಯೂರಿಯಾ ಬದಲಿಗೆ ದ್ರವರೂಪದ ನ್ಯಾನೋ ಯೂರಿಯಾ ಬಳಸಬೇಕಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಮೋಹನ್ ಕುಮಾರ್ ಹೇಳಿದರು.

ಕೃಷಿ ಇಲಾಖೆ ಹಾಗೂ ಇಫ್ಕೊ ಸಂಸ್ಥೆ ಸಹಭಾಗಿತ್ವದಲ್ಲಿ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಆಲಗೋಡನಹಳ್ಳಿ ರೈತ ಮುಖಂಡ ರವಿಗೌಡಯ್ಯನವರ ಜಮೀನಿನಲ್ಲಿ ಬೆಳೆಯಲಾಗಿದ್ದ ಮೆಕ್ಕೆ ಜೋಳಕ್ಕೆ ನ್ಯಾನೋ ಯೂರಿಯಾವನ್ನು ಆತ್ಮ ಯೋಜನೆಯಲ್ಲಿ ಡ್ರೋನ್ ಮೂಲಕ ಸಿಂಪರಣೆಯ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ಅವರು, ನ್ಯಾನೋ ಯೂರಿಯಾ ಶೇ.೪ ಸಾರಜನಕ ಹೊಂದಿದೆ . ನ್ಯಾನೋ ಡಿಎಪಿ ಶೇ.೮ ಸಾರಜನಕ ಮತ್ತು ಶೇ.೧೬ ರಂಜಕ ಹೊಂದಿದ್ದು, ಬೆಳೆಗೆ ಅಗತ್ಯ ಪೋಷಾಕಾಂಶ ಒದಗಿಸಿ ಇಳುವರಿ ಹೆಚ್ಚಿಸುತ್ತದೆ. ಕೈಯಿಂದ ಗೊಬ್ಬರ ಹಾಕುವುದರಿಂದ ಶೇ.೩೦ರಷ್ಟು ಮಾತ್ರ ಬೆಳೆಗಳಿಗೆ ಬಳಕೆಯಾಗುತ್ತದೆ. ದ್ರವರೂಪದ ನ್ಯಾನೋ ಯೂರಿಯಾ. ಡಿಎಪಿಯನ್ನು ಡ್ರೋನ್ ಅಥವಾ ಸ್ಪ್ರೇಯರ್ ಮೂಲಕ ಸಿಂಪಡಿಸಿದರೆ ಶೇ.೮೦ ರಷ್ಟು ಬೆಳೆಗಳಿಗೆ ತಲುಪುತ್ತದೆ ಬೆಳೆಗಳಿಗೆ ಅಗತ್ಯ ಸಾರಜನಕ ನೀಡುತ್ತದೆ. ಎಲೆಗಳ ಮೇಲೆ ಗೊಬ್ಬರ ಸಿಂಪಡಿಸುವುದರಿAದ ಪೋಷಾಕಾಂಶದ ಸದ್ಬಳಕೆಯಾಗುತ್ತದೆ. ಪೋಲಾಗುವಿಕೆ ಕಡಿಮೆಯಾಗುತ್ತದೆ. ಸಾಮಾನ್ಯ ರಸಗೊಬ್ಬರ ಬಳಕೆಯಿಂದ ಮಣ್ಣು ಮತ್ತು ನೀರಿನ ಮೇಲೆ ಉಂಟಾಗುವ ದುಷ್ಪರಿಣಾಮ ತಡೆಯಲು ಅನುಕೂಲವಾಗಲಿದೆ. ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಅಧಿಕ ಹರಡುವಿಕೆ ಸಾಮರ್ಥ್ಯ ಹೊಂದಿರುವುದರಿAದ ಅವುಗಳನ್ನು ಇತರೆ ಕೀಟನಾಶಕ, ಶಿಲೀಂದ್ರನಾಶಕ ಮತ್ತು ನೀರಿನಲ್ಲಿ ಕರಗುವ ರಸಗೊಬ್ಬರಗಳೊಂದಿಗೆ ಸೇರಿಸಿ ಸಿಂಪಡಿಸಬಹುದು ಎಂದರು.

ಯೂರಿಯಾ ಗೊಬ್ಬರವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳತ್ತಿದ್ದು, ಸರ್ಕಾರ ಹಾಗೂ ರೈತರು ಹೆಚ್ಚು ಕಾಯಬೇಕು. ಇದನ್ನು ಕೈಯಿಂದ ಸಿಂಪಡಣೆ ಮಾಡುವುದರಿಂದ ಹೆಚ್ಚಿನ ಗೊಬ್ಬರ ನೆಲಕ್ಕೆ ಬಿದ್ದು, ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಅತಿ ಕಡಿಮೆ ಇದೆ. ಅತಿಯಾದ ಯೂರಿಯಾ ಬಳಕೆಯಿಂದ ಇಂಗಾಲ ಪ್ರಮಾಣ ಕ್ಷೀಣಿಸುತ್ತಿದೆ. ರೈತರು ಬೆಳೆಗಳ ತ್ಯಾಜ್ಯ, ಕಳೆಗಳನ್ನು ಡಿಕಾಂಪೋಸ್ಟ್ ಮಾಡಿ ಸಾವಯವ ಗೊಬ್ಬರವನ್ನಾಗಿ ಬಳಸುವುದರಿಂದ ಭೂಮಿಯ ಸಾವಯವ ಇಂಗಾಲದ ಪ್ರಮಾಣ ಹೆಚ್ಚಾಗುತ್ತದೆ ಎಂದರು.

ಭಾರತದಲ್ಲಿ ತಯಾರಿಸುತ್ತಿರುವ ನ್ಯಾನೊ ಗೊಬ್ಬರವು ಮಾರುಕಟ್ಟೆಯ ಎಲ್ಲಾ ಗೊಬ್ಬರದಂಗಡಿಗಳಲ್ಲಿ ದೊರೆಯುತ್ತಿದ್ದು, ಕಡಿಮೆ ಖರ್ಚಿನಲ್ಲಿ ಸಿಂಪಡಣೆ ಮಾಡಬಹುದು, ಡೋನ್ ಮೂಲಕ ೪ ರಿಂದ ೫ ನಿಮಿಷಗಳಲ್ಲಿ ಒಂದು ಎಕರೆ ಕೃಷಿ ಜಾಗವನ್ನು ಸಿಂಪಡಿಸಲು ಸಾಧ್ಯವಾಗುತ್ತದೆ. ಇಫ್ಕೊ ಸಂಸ್ಥೆ ವತಿಯಿಂದ ಪ್ರತಿ ಎಕರೆಗೆ ೫೦೦ ರೂ. ನಿಗದಿಪಡಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ರೈತರು ಹತ್ತಿರದ ರೈತಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದೆಂದರು.

ರೈತ ಮುಖಂಡ ರವಿ ಗೌಡಯ್ಯ ಮಾತನಾಡಿ ರೈತರಲ್ಲಿ ನ್ಯಾನೋ ಯೂರಿಯಾ ಬಳಕೆ ಕುರಿತು ಅರಿವಿನ ಅಗತ್ಯವಿದೆ ಎಂದು ಹೇಳಿದರು. ಹರಳು ರೂಪದ ಗೊಬ್ಬರವನ್ನು ಹಾಕುವುದರಿಂದ ಅಧಿಕ ಖರ್ಚು ಬರುತ್ತಿದ್ದು, ಸಮಯವು ಹೆಚ್ಚಿನದಾಗಿ ಅಗತ್ಯವಿದೆ. ಇಲಾಖೆ ಹೊಸ ಪ್ರಯೋಗದ ಮೂಲಕ ಔಷಧಿ, ಗೊಬ್ಬರ ಸಿಂಪರಣೆಗೆ ಮುಂದಾಗಿರುವುದು ರೈತರಿಗೆ ಅನುಕೂಲವಾಗಿದೆ ಎಂದರು. ಇನ್ನೂ ಡ್ರೋನ್ ಮೂಲಕ ಗೊಬ್ಬರ ಸಿಂಪರಣೆಯ ಕುರಿತಾಗಿ ಇಫ್ಕೋ ಗೊಬ್ಬರ ಕಂಪೆನಿಯ ಪ್ರತಿನಿಧಿ ರೈತರಿಗೆ ಮಾಹಿತಿ ನೀಡಿದರು.

ಇನ್ಣೂ ಡ್ರೋನ್‌ಗೆ ಸಂಪರ್ಕಿಸಲ್ಪಟ್ಟ ಕ್ಯಾನ್‌ನಲ್ಲಿ ೯ ಲೀ. ನೀರು ಮತ್ತು ಅರ್ಧ ಲೀಟರ್ ನ್ಯಾನೋ ಯೂರಿಯಾ ಮತ್ತು ಅರ್ಧ ಲೀಟರ್ ನ್ಯಾನೋ ಡಿಎಪಿ ಗೊಬ್ಬರ ಹಾಕಿ ಮೆಕ್ಕೆ ಜೋಳದ ಬೆಳೆಗೆ ಸಿಂಪಡಿಸಲಾಯಿತು. ಈ ವೇಳೆ ಉದಯಪುರ ಕೃಷಿ ಅಧಿಕಾರಿ ಪಲ್ಲವಿ, ಆತ್ಮ ತಾಂತ್ರಿಕ ಅಧಿಕಾರಿ ಶ್ರೀನಿವಾಸ್, ಇಫ್ಕೋ ಸಂಸ್ಥೆಯ ಪ್ರತಿನಿಧಿ ಪ್ರವೀಣ್ ರೈತನಾಯಕರಾದ ಶಂಕರಣ್ಣ ಮೀಸೆ ಮಂಜಣ್ಣ ಸೇರಿದಂತೆ ಇತರರು ಇದ್ದರು