14.6 C
Munich
Home ಜಿಲ್ಲೆ ಹಾಸನ: ಹಾಸನಾಂಬ ಜಾತ್ರಾ ಕರ್ತವ್ಯದ ಐಡಿ ಕಾರ್ಡ್ ಬೇರೆಯವರಿಗೆ ಕೊಟ್ಟು ದೇವರ ದರ್ಶನಕ್ಕೆ ಕಳುಹಿಸಿದ್ದ ಇಬ್ಬರು...

ಹಾಸನ: ಹಾಸನಾಂಬ ಜಾತ್ರಾ ಕರ್ತವ್ಯದ ಐಡಿ ಕಾರ್ಡ್ ಬೇರೆಯವರಿಗೆ ಕೊಟ್ಟು ದೇವರ ದರ್ಶನಕ್ಕೆ ಕಳುಹಿಸಿದ್ದ ಇಬ್ಬರು ಹಾಸ್ಟೆಲ್ ವಾರ್ಡನ್ ಗಳನ್ನು ಅಮಾನತು ಮಾಡಿದ ಡಿಸಿ

ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕರ್ತವ್ಯ ಲೋಪ ಎಸಗಿದ ಇಬ್ಬರು ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್‌ಗಳ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ದೊಡ್ಡಬೆಮ್ಮತ್ತಿ (ಅರಕಲಗೂಡು) ವಾರ್ಡನ್  ಆನಂದ್ ಹಾಗೂ ಹಳೆಬೀಡು (ಬೇಲೂರು) ವಾರ್ಡನ್  ರಮೇಶ್ ಅವರು ತಮ್ಮ ಗುರುತಿನ ಚೀಟಿಗಳನ್ನು ಬೇರೆಯವರಿಗೆ ನೀಡಿ, ಅನ್ಯ ವ್ಯಕ್ತಿಗಳು ದೇವಾಲಯ ಆವರಣ ಪ್ರವೇಶಿಸಲು ಅವಕಾಶ ಕಲ್ಪಿಸಿದರೆಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಇಬ್ಬರನ್ನೂ ಅಮಾನತ್ತಿನಲ್ಲಿಟ್ಟು ಇಲಾಖಾ ವಿಚಾರಣೆ ಕೈಗೊಳ್ಳಲು ಆದೇಶಿಸಿದ್ದಾರೆ.

 

ಜಿಲ್ಲಾಡಳಿತದಿಂದ ನೀಡಲಾದ ಕರ್ತವ್ಯ ಸೂಚನೆಗಳ ವಿರುದ್ಧವಾಗಿ ವರ್ತಿಸಿ, ಅಧಿಕೃತ ಗುರುತಿನ ಚೀಟಿಯ ದುರುಪಯೋಗ ಮಾಡಿದ ಇಬ್ಬರು ನೌಕರರು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮ 2021ರ ನಿಯಮ 3 ಉಲ್ಲಂಘನೆ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ದೃಢಪಟ್ಟಿದೆ.

 

ಜಿಲ್ಲಾಧಿಕಾರಿಯವರು, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಈ ಆದೇಶದ ಪ್ರತಿಯನ್ನು ಕಳುಹಿಸಿದ್ದಾರೆ. ಜೊತೆಗೆ, ಉಪನಿರ್ದೇಶಕರು (ಸಮಾಜ ಕಲ್ಯಾಣ ಇಲಾಖೆ, ಹಾಸನ) ಅವರಿಗೆ ಅಮಾನತ್ತಿನಲ್ಲಿರಿಸಿದ ನೌಕರರ ವಿರುದ್ಧ ದೋಷಾರೋಪಣಾ ಪಟ್ಟಿ ತಯಾರಿಸಿ, ಇಲಾಖಾ ವಿಚಾರಣೆ ಪ್ರಾರಂಭಿಸಲು ಸೂಚನೆ ನೀಡಲಾಗಿದೆ.

ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಶಿಸ್ತಿನ ಹಾಗೂ ಭದ್ರತಾ ವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದಂತೆ ಕ್ರಮಕೈಗೊಳ್ಳಲು ಆಡಳಿತ ಕಟ್ಟುನಿಟ್ಟಿನ ನಿಲುವು ತಾಳಿದೆ.

– ಕನ್ನಡಪೋಸ್ಟ್ ನ್ಯೂಸ್ ನೆಟ್ವರ್ಕ್, ಹಾಸನ

error: Content is protected !!